ಅನುಭಂಧದ ಕಾರಂಜಿ......ಸಣ್ಣ ಕಥೆ
"ಅಪ್ಪನಿಗೆ ಫೋನ್ ಮಾಡಿದ್ಯೇನೆ? ನಾನು ಮೊನ್ನೆ ಮಾಡಿದ್ದಾಗ, ಯಾಕೋ.. ಶೀಲಾ ಫೋನೇ ಮಾಡಿಲ್ಲ ಅಂತ ಪೇಚಾಡ್ತಿದ್ದರು", ನೀಲಾ ಅಕ್ಕ ಫೋನ್ ನಲ್ಲಿ ಹೇಳಿದಾಗ, ಯಾಕೋ ಏನೆಳಬೇಕೋ ತೋಚದೆ," ಹಾ...ಹಾ.. ಏನಂದೆ.. ಫೋನಾ.. ಮಾಡ್ತೀನಿ ಬಿಡುವಾಗಲಿಲ್ಲ ಇತ್ತೀಚೆಗೆ, ಈಗ ಫೋನ್ ಇಡ್ಲಾ ..."ಎಂದು ಫೋನ್ ಕಟ್ ಮಾಡಿದ್ದೆ. ನಂತರ, ಆಫೀಸ್ ಕೆಲಸದಲ್ಲೂ.. ಸರಿಯಾಗಿ ತೊಡಗಿಸಿಕೊಳ್ಳಲಾಗಿರಲಿಲ್ಲ.
ನಾಳೆ ಶನಿವಾರ ಅದರ ನಂತರ ಬರೋ.. ಹಬ್ಬಗಳ ರಜಾ ಸೊ.. ಲಾಂಗ್ ವೀಕೆಂಡ್ ... ಅನ್ನೋ ಗಡಿಬಿಡಿಲಿ ಎಲ್ಲರೂ... ಬೇಗ ಬೇಗ ಕೆಲಸ ಮುಗಿಸಿ ತಮ್ಮ ತಮ್ಮ ಊರಿಗೊ,ಮನೆಗೋ ಹೋಗುವ ಆತುರದಲ್ಲಿದ್ದರು. ನಾನ್ ಹೋಗಿ ಮಾಡುವುದಾದ್ರೂ ಏನು....? ಅದೇ PG.. ಅದೇ ಒಂಟಿತನ.. ಅದರ ಬದಲು ಆಫೀಸ್ನಲ್ಲೇ ಇನ್ನೊಂದಿಷ್ಟು ಹೊತ್ತು ಕೂರೋಣ ಅನ್ನಿಸ್ತಾ ಇತ್ತು.... ಆದರೆ ನಂತರ ಕ್ಯಾಬ್ ಗಳು ಸಿಗುತ್ತಿರಲಿಲ್ಲ ವಾದ್ದರಿಂದ.. ಸಮಯಕ್ಕೆ ಸರಿಯಾಗಿ ಹೊರಟರೇನೇ ಸರಿ ಅಂತ .. ಸಿಸ್ಟಮ್ ಶಟ್ ಡೌನ್ ಮಾಡಿ ರೆಡೀ ಆದೆ. "ಆಯ್ತಾ ಶೀಲಾ, ಹೊರೋಡೊಣವಾ.. ಸದ್ಯ ನಾಳೆ ಇಂದ ವೀಕೆಂಡ್... ಸೋಮವಾರ ಈದ್ ಮಿಲಾದ್, ಮಂಗಳವಾರ ಕ್ರಿಸ್ಮಸ್.. ಒಟ್ಟಿಗೆ ನಾಲ್ಕು ದಿನ... ಆರಾಮಾಗಿ ಅಮ್ಮನ ಮನೆಗೆ ಹೋಗ್ತಿದೀನಿ.. ಗಂಡ ಮಗನ ಜೊತೆ, ತುಂಬಾ ದಿನ ಆಗಿತ್ತು ಅಪ್ಪ ಅಮ್ಮನ್ನ ನೋಡಿ. ನೀನು ಹೋಗ್ತಿದಿಯಲ್ಲ ಮೂಡು ಬಿದ್ರೆಗೆ ?" ಎಂದು ಒಂದೇ ಸಮ ವಟಗುಟ್ಟಿದವಳತ್ತಾ ನೋಡಿದೆ, "ಹ.. ಇನ್ನೂ ಡಿಸೈಡ್ ಮಾಡಿಲ್ಲ ಕಣೆ ನೇಹಾ, ನೋಡೋಣ.. ನಾಳೆ ಆದ್ರೆ ಹೋಗ್ತೀನಿ..."ಎಂದೇ ನೀರಸವಾಗಿ. ನೇಹಾ ಆಶ್ಚರ್ಯದಿಂದ "ಅದೇನೇ .. ನಾವೆಲ್ಲಾ,... ಇಂಥದೆನಾದ್ರೂ ಒಂದು ರಜಾ ಸಿಕ್ಕರೆ ಸಾಕು ಅಂತ ಕಾಯ್ತಿದ್ದರೆ, ನೀನು ಅದೇ ಕಿತ್ತೋಗಿರೋ PG ನಲ್ಲಿ ಇರ್ತೀನಿ ಅಂತಿಯಲ್ಲಾ..." ಎಂದವಳಿಗೆ ಏನು ಉತ್ತರಿಸ ಬೇಕೊಂತ ಯೋಚಿಸ್ತಾ ಇದ್ದೋಳಿಗೆ.. ನಮ್ಮ ರೂಟ್ ನಾ ಕ್ಯಾಬ್ ಕಾಣಿಸಿ "ಹೇ.. ನಡಿಯೇ ನೇಹಾ... ನಮ್ಮ ಕ್ಯಾಬ್ ಆಲ್‌ರೆಡೀ ಬಂದಾಗಿದೆ... " ಅಂತ ಧಾಪುಗಾಲಕಿ ಅತ್ತ ನಡೆದೇ.
PG ಗೆ ಬಂದ ಮೇಲೆ ಸಹ ಅದೇ ಗುಂಗಿನಲ್ಲಿದ್ದೆ.. ಊರಿಗೆ ಹೋಗಲೋ ಬೇಡವೋ...ಅಂತ. ಯಾಕೋ... ಹೋಗುವ ಮನಸ್ಸಾಗಲಿಲ್ಲ... ಸುಮ್ಮನಾದೆ. ಸ್ವಲ್ಪ ಹೊತ್ತು ಲ್ಯಾಪ್‌ಟಾಪ್ ಮುಂದೆ ಕೂತಿದ್ದು. ... ಎದ್ದು.. ಊಟ ಮಾಡಿ ಬಂದೊಳಿಗೆ.. ಇನ್ನೂ ನಾಲ್ಕು ದಿನ ಹೇಗೆ ಕಳೆಯೋದು ಅನ್ನೋ ಯೋಚನೆಯಲ್ಲಿರುವಾಗಲೇ .. ಮೊಬೈಲ್ ರಿಂಗಾಯ್ತ... ನೋಡಿದರೆ ಅಮ್ಮ...
"ಹಲೋ... ಹೇಳಮ್ಮಾ" ಅಂದೆ.
"ಕೂಸೇ... ಊಟ ಆಯ್ತಾ..." ಅಮ್ಮನ ಕಳಕಳಿ.
"ಇದೋ ಈಗ್ತಾನೇ ಮಾಡಿ ಬಂದೆ, ನಿಂದಾಯ್ತಮ್ಮ " ಅಂದೆ.
"ಆಯ್ತು ಕೂಸೇ, ಏನೋ..ಈಸಲ ಎರಡು ಹಬ್ಬಗಳು, ಒಟ್ಟಿಗೆ ಬಂದು, ನಾಲ್ಕು ದಿನ ರಜಾ ಅಂತಲ್ಲ.. ಊರಿಗೆ ಬಾ ಕೂಸೇ... ನೋಡೋ ಹಂಗಾಗಿದೆ ... ನೋಡಿ ಆಗಲೇ ಮೂರು ತಿಂಗಳಾಗ್ತ ಬಂತು" ಅಮ್ಮನ, ಪ್ರೀತಿ ಒಸರೊ.. ದ್ವನಿ ಕೇಳಿ... ಗಂಟಲು ಒತ್ತಿ ಬಂತು.
"ನನಗೂ ನಿನ್ನ ನೋಡೋ ಹಾಗಾಗಿದೆಯೇ...ನೀನೇ ಬರಬಾರದ....ಇಲ್ಲಿಗೆ." ನುಗ್ಗಿ ಬಂದ ಅಳು ನುಂಗಿ ಕೇಳಿದೆ.
"ಅದೆಲ್ಲ ಆಗೋಲ್ಲಾ ಅಂತ ನಿನಗೆ ಗೊತ್ತಲ್ಲ ಕೂಸೇ... ನೀನೇ ಬಾ.. ಇಲ್ಲ ಅನ್ನ ಬೇಡ..." ಎಂಬ ಅಮ್ಮನ ಮಾತಿಗೆ... ಬರೆ ಹೂಂ ಗುಟ್ಟಿದೆ.
"ಕಾಯ್ತಿರ್ತೀನಿ, ನಾಳೆ ಬಂದು ಬಿಡ್ತಿಯಲ್ಲ...ಇವತ್ತು ರಾತ್ರಿ ಹೋರ್ಡ್ತ ಇದೀಯಲ್ಲಾ ಅಲ್ಲಿಂದ??" ಅದಕ್ಕೂ ಹೂಂ ಗುಟ್ಟಿದೆ.
"ಸರಿ ಇಡ್ತೀನೆ" ಅಂತ ಅಮ್ಮ ಒದ್ದೆ ಧನಿಯಲ್ಲಿ ಹೇಳಿ ಫೋನ್ ಕಟ್ ಮಾಡಿದರು.
ಇನ್ನೂ ಯೋಚಿಸ್ತಾ ಕೂತ್ರೆ.. ಬಸ್ಸು ಸಿಗೋಲ್ಲ ಅಂತ... ಟೈಮ್ ನೋಡಿದೆ .. 8.30...ಮೆಜೆಸ್ಟಿಕ್ ಇಲ್ಲಿಂದ ಅರ್ಧ ಗಂಟೆ...ಯಾವುದಾದ್ರೂ ಬುಸ್ ಸಿಕ್ಕೇ ಸಿಗುತ್ತೆ ಅಂತ.. ಕೈಗೆ ಸಿಕ್ಕ ನಾಲ್ಕು ಬಟ್ಟೆ ಬ್ಯಾಗಿಗೆ ತುರುಕಿ ಹೊರಟೇ ಬಿಟ್ಟೆ.
ಮೆಜೆಸ್ಟಿಕ್ ನಲ್ಲಿ ಇಳಿದಾಗ... ಜನ ಜುಂಗುಳಿ ನೋಡಿ..... ಒಮ್ಮೆ ಭಯವಾಯ್ತು.. ಬಸ್ ಬುಕ್ ಮಾಡಿಲ್ಲ ಏನೂ ಇಲ್ಲ... ಬುಸ್ಸು ಸಿಗುತ್ತೊ ಇಲ್ಲವೋ ಅಂತ... ಅದೂ... back to back ನಾಲ್ಕು ದಿನ ರಜಾ... ಎಲ್ಲರೂ ಊರಿಗೋಗೋ ಆತುರ. ಅಂತೂ ಇಂತೂ ಹೇಗೋ ರಾಜಹಂಸ ದಲ್ಲಿ ಒಂದು ಸೀಟ್ ಸಿಕ್ಕಿ ಹತ್ತಿ ಕೂತದ್ದಾಯ್ತು, ಕೊನೆ ಸೀಟ್ ಬೇರೆ.. ಇನ್ನೂ ನಿದ್ದೆ ಮಾಡಿದ ಹಾಗೆ ಇದೆ....!.
ಸರಿ.. ಬುಸ್ ಫುಲ್ ಆದದ್ದರಿಂದ... ಸರಿಯಾದ ಸಮಯಕ್ಕೆ ಹೊರಟಿತು.
ಊರಿಗೆ ಹೋಗಲೇ ಬಾರದೆಂದು ಕೊಂಡಿದ್ದವಳಿಗೆ, ಅಮ್ಮನ ದ್ವನಿ.. ಎಳಿದುಕೊಂಡು ಹೊರಟಿತ್ತು.
ಸೀಟೀಗೆ ತಲೆಯೊರಗಿಸಿದವಳಿಗೆ.. ಬಾಲ್ಯದ ನೆನಪು.....ಒಂದರ ಮೇಲೊಂದು ... ಕಣ್ಣಿಗೆ ಕಟ್ಟ ತೊಡಗಿತು
ನೀಲಾ,ಶೀಲಾ ಇಬ್ಬರೇ ಮಕ್ಕಳು ಮಂಜಯ್ಯ ಮತ್ತು ಶಾಂತಮ್ಮನಿಗೆ, ಮಂಜಯ್ಯ ಹೆಗಡೇರು.. ಮೂಡಗೆರೆ ಯ ಹತ್ತಿರದ.. ಕಬ್ಬಿನಗದ್ದೆಯವರು. ಸಾಕಷ್ಟು ಗದ್ದೆ, ತೋಟ ...ಸುಖಿ ಸಂಸಾರ ನಡೆಸಲು.. ಆದರೆ.. ದುರಾಸೆ... ಧರ್ಪದ ಮಂಜಯ್ಯ ನಿಗೆ ಸಂತೃಪ್ತಿ ಎಂಬುದೇ ಇಲ್ಲ.. ಗಂಡು ಮಗುವಾಗಲಿಲ್ಲಾಂಬ ಅಸಂತೃಪ್ತಿ ಹೆಂಡತಿಯ ಮೇಲೆ... ಸದಾ ಹೊಡೆಯುವುದೋ.. ಬೈಯ್ಯುವುದಕ್ಕೊ... ಕಾರಣವಾದರೆ.....
ಎಷ್ಟೇ.. ಬೆಳೆ ಬಂದರೂ.. ಪಕ್ಕದ ತೋಟದ ಮಲ್ಲಿಕಾರ್ಜುನ ಹೆಗಡೇರಷ್ಟು ಬೆಳೆ ಯಾಗಲಿಲ್ಲವೆಂಬ.. ಅಸಂತೃಪ್ತಿ... ಕೆಲ್ಸದವರ ಮೇಲೆ...ಸದಾ... ವಟ ವಟಗುಟ್ಟುತ್ತಾ... ಬೈಗಳಿಗೆ ಕಾರಣವಾಯ್ತು....
ಹಸ್ಲರ ಮೇಲೆ ಸದಾ..."ನಿಮ್ಮ ಜಾತಿಯೇ ಕಳ್ಳ ಜಾತಿ... ನಿಮಗೆ ಸಲಿಗೆ ಕೊಟ್ಟಷ್ಟು... ನಮ್ಮ ತಲಿ ಮೇಲೆ ಕಾರ ಅರೀತಿರಿ, ನಾಯಿ ನಾ ಸಿಂಹಾಸನದ ಮೇಲೆ ತಂದಿಡಲಾದಿತೆ" ಅಂತ... ಅವರನ್ನು ತುಳಿಯುವ ಪಣಹೋತ್ತವರಂತೆ ಸದಾ..ಅವರನ್ನು ಕಂಡಾಗಲೆಲ್ಲ ನಾಲ್ಕು ಕಣ್ಣು..ನಾಲ್ಕು ಬಾಯಿ ಮಂಜಯ್ಯನವರಿಗೆ.
ನೀಲಾ.. ಮೊದಲ ಮಗಳಾದ್ದರಿಂದ.. ಅವಳ ಮೇಲೆ ಸ್ವಲ್ಪ ಪ್ರೀತಿ ಇತ್ತು. ಆದರೆ ಎರಡನೇದು ಹೆಣ್ಣಾ ದಾಗ... ನಿರಾಸೆಗೊಂಡಿದ್ದ ಮಂಜಯ್ಯ... ಹೆಂಡತಿ ಮಗಳ ಮುಖವನ್ನ ಒಂದು ವಾರ ನೋಡಿರಲಿಲ್ಲ.
ಹಾಗಾಗಿ,,, ಶೀಲಾ ಅಮ್ಮನ ಮಗಳಾಗೆ ಉಳಿದಿದ್ದಳು. ಎಲ್ಲದರಲ್ಲೂ ತಾರ ತಮ್ಯ ಮಂಜಯ್ಯನವರದು. ನೀಲಾ ಬಿಟ್ಟ ಬಟ್ಟೆ, ಆಟಿಕೆ, ಪುಸ್ತಕಗಳಿಂದಲೇ... ಶೀಲಾ ಓದಿದ್ದು, ಬೆಳದಿದ್ದು. ಅಮ್ಮನ ಪ್ರೀತಿಯೊಂದಿಲ್ಲದಿದ್ದಾರೆ ಏನಾಗಿರುತ್ತಿದ್ದಳೋ.
ಒಂದೆರಡು ಘಟನೆಗಳು... ಅಪ್ಪ ಅನ್ನುವ ಗೌರವ ವನ್ನು ಸಹ ದೂರ ಮಾಡಿತ್ತು.
ಒಮ್ಮೆ ನೀಲಾ, ಸುಮಾರು 12 ವರ್ಷದವಳಿರ ಬಹುದು,ಹಸ್ಲರಾ ಕಾನನ ಮಗ ಸಣ್ಣನ, ಜೊತೆ ಆಡುತ್ತಿದ್ದಳು, ಸಣ್ಣಾನು ನೀಲಾಳ ವಯಸ್ಸಿನವನೇ, ಅಡಿಕೆ ಗರಿಯ ಟೋಪಿ ಮಾಡುವುದನ್ನು ಹೇಳಿಕೊಡುತ್ತಿದ್ದ... ದೂರದಿಂದಲೇ.
ನೀಲಾಳಿಗೆ ಏನನ್ನಿಸಿತೋ.. ಸಣ್ಣನ ತಲೆ ಮೇಲಿನ ಟೋಪಿ ತೆಗೆದು.. ತನ್ನ ನೆತ್ತಿಯ ಮೇಲಿಟ್ಟುಕೊಂಡುಬಿಟ್ಟಳು, ಅದೇ ಸಮಯಕ್ಕೆ ಸಣ್ಣ, "ಬ್ಯಾಡಿ ಅಮ್ಮೋರೇ... ಅದನ್ನು ಕೊಟ್ಟು ಬಿಡಿ, ನಿಮ್ಮ ಅಪ್ಪೋರು ನೋಡಿದ್ರೆ..." ಅಂತ ಭಯದಿಂದಲೇ ಅವಳ ನೆತ್ತಿಯ ಮೇಲಿಂದ ತೆಗೆದುಕೊಳ್ಳಲು ಕೈ ಹಾಕಿದ್ದನಷ್ಟೇ.. ಎಲ್ಲಿದ್ದರೋ ಮಂಜಯ್ಯ... " ಏನೋ... ಬಡವ .. ಮೈ ಮೇಲಿನ ಕಬರು ಎಲ್ಲದೋ ನಿಂಗೆ " ಎಂದು ಅಲ್ಲೇ ಬಿದ್ದಿದ್ದ ಬಿದಿರಿನ ಕಡ್ಡಿಯನ್ನೆತ್ತಿ ಹಿಂದೆ ಮುಂದೆ ನೋಡದೆ... ಹೊಡೆಯಲು ಶುರು ಮಾಡಿಬಿಟ್ಟರು.....ಅನಿರೀಕ್ಷಿತ ವಾಗಿ ಬಿದ್ದ ಏಟುಗಳಿಂದ, ಸಣ್ನನಿಗೆ ಬಾಯಿ ತೆಗೆಯಲೂ ಆಗದಂಥ ಭಯ..ಚಡ್ಡಿ ಒದ್ದೆ ಮಾಡಿಕೊಂಡು... ನೆಲದ ಮೇಲೆ ಬಿದ್ದಿದ್ದವನನ್ನು, ಅಲ್ಲೇ ಕೆಲಸ ಮಾಡುತ್ತಿದ್ದ ಅವರಪ್ಪ, ಕಾನ.. ಓಡಿ ಬಂದು ಅವುಚಿ ಕೊಂಡಿದ್ದ.
"ಅಯ್ಯಾರೆ ಬಿಟ್ಟು ಬಿಡಿ.. ಏನು ಅರೀದ ಕಂದನ ಮ್ಯಾಲೆ ಹೀಂಗೆ ಕೈ ಮಾಡಿರಲ್ಲ.. ಮನುಸಥ್ವ ಆದ ನಿಮ್ಗೆ" ಎಂದು ಮಗನನ್ನು ತಬ್ಬಿಕೊಂಡು ಅತ್ತಿದ್ದ. "ನಂಗೆ, ಮನುಸಥ್ವದ ಬಗ್ಗೆ ಹೇಳ್ತಿಯೆನ್ಲಾ... ಬಡ್ಡಿ ಮಗನೇ......ಯಾರತ್ರ ಹೇಂಗಿರಬೇಕಂತ ತಿಳಿಸೋದು ಬ್ಯಾಡೇನ್ಲಾ ನಿನ್ ಮಗಂಗೆ" ಅಂತ ಅವನ ಬೆನ್ನ ಮೇಲೂ ಒಂದೇಟು ಹಾಕಿದ್ದರು.
ಎಲ್ಲಾ ನೋಡುತ್ತಿದ್ದ ... ನೀಲಾ ಹನಿಗಣ್ಣವಳಾಗಿದ್ದರೆ, 8 ವರ್ಷದ ಶೀಲಾ, ತಾನೂ ಚಡ್ಡಿ ಒದ್ದೆ ಮಾಡಿಕೊಂಡು ಭಯದಿಂದ.. ಕಂಪಿಸುತ್ತಿದ್ದಳು.
ನಂತರದ ದಿನಗಳಲ್ಲಿ... ಶೀಲಾ ಅಪ್ಪನಾ ಬಳಿ ಹೋಗುವುದಿರಲಿ, ಮಾತಾಡುವುದಿರಲಿ, ಅವರಿದ್ಡಕಡೆ ಸುಳಿಯುತ್ತಲೂ ಇರಲಿಲ್ಲ.. ಎಲ್ಲ ಅಮ್ಮನ ಬಳಿಯೇ... ಬೆಳೆದದ್ದು. ಅಮ್ಮನ ಸೆರಗಿನ ಮರೆಯಲೇ...
ಆದರೆ ಓದಿನಲ್ಲಿ ಜಾಣೆಯಾದ ಶೀಲಾ... ಊರಿಗೆ, ಓದಿದ ಶಾಲಾ, ಕಾಲೇಜಿಗೆ ಒಳ್ಳೆ ಹೆಸರು ತಂದಿದ್ದಳು... ಆಗೆಲ್ಲ ಮಂಜಯ್ಯ... ಹೆಮ್ಮೆಯಿಂದ ಬೀಗಿ... ಚಿಕ್ಕ ಮಗಳನ್ನು ಪ್ರೀತಿಸ ತೊಡಗಿದ್ದರು. ನೀಲಾ PUC ಮಾಡಲಾಗದೆ ಮನೆಯಲ್ಲೇ..ಕೂತು.. 2 ವರ್ಷಗಳೇ ಕಳೆದಿದ್ದವು... ದೂರದ ನೆಂಟ ರ ಹುಡುಗನೇ...ಬೆಂಗಳೂರಿನಲ್ಲಿ ಬ್ಯಾಂಕ್ ಕೆಲಸದಲ್ಲಿ ಇದ್ದ ನಟರಾಜ ನಿಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿದ್ದರು.
ಈಗೀಗ.. ಎಲ್ಲ ಸರಿ ಇದೆ ಅನ್ನೋವಷ್ಟರಲ್ಲಿ, ಮತ್ತೊಂದು ಘಟನೆ... ಶೀಳಾಳಿಗೆ.. ತಂದೆಯನ್ನು... ದ್ವೇಷಿಸಿ ದೂರವೇ ಇಡುವಂತೆ ಮಾಡಿತ್ತು.
ಶೀಲಾ BSc, ಮಾಡುತ್ತಿದ್ದಳು, ಹಸ್ಲರ ಅಣ್ಣಯ್ಯ, ಸಹ ಅದೇ ಕಾಲೇಜಿ ನಲ್ಲಿ BA ಓದುತ್ತಿದ್ದ. ಅಣ್ಣಯ್ಯನ ಅಪ್ಪ ಮುನಿಯ ಪಕ್ಕದ ತೋಟದ ಮಲ್ಲಿಕಾರ್ಜುನ ಹೆಗಡೇರ ತೋಟದಲ್ಲಿ ಕೆಲಸ ಮಾಡುವವ.. ಮಲ್ಲಿಕಾರ್ಜುನ ಹೆಗಡೇರು, ಹಸ್ಲರ ಮಕ್ಕಳನ್ನು ಓದಿ.. ಮುಂದೆ ಬರಲು ತುಂಬಾನೇ ಸಹಕಾರ, ಪ್ರೋತ್ಸಾಹ ನೀಡಿದ್ದರು.
ಅವರಲ್ಲೆಲ್ಲ.. .. ಮುಂದು ಬಂದಿದ್ದವನೆಂದರೆ ಮುನಿಯನ ಮಗ, ಅಣ್ಣಯ್ಯ ಒಬ್ಬನೇ...
ಒಮ್ಮೆ ಕಾಲೇಜಿ ನಿಂದ ಬರುವುದು ಲೇಟ್ ಆಗಿ, ಕತ್ತಲಾಗಿ ಬಿಟ್ಟಿತ್ತು, ಶೀಲಾಳ ಹಿಂದೆ ಬಸ್ ಇಳಿದ ಅಣ್ಣಯ್ಯ, ಕತ್ತಲ ದಾರಿಯಲ್ಲಿ ಶೀಲಾ ಒಬ್ಬಳೇ ನಡೆಯುವುದನ್ನು ಕಂಡು "ಅಮ್ಮೋರೇ, ಕತ್ತಲಲ್ಲಿ ಹುಳು ಹುಪ್ಪಟೆ, ಕಾಟ... ನಾನು ನಿಮ್ಮ ಮನೆಯವರೆಗೂ ಬಿಟ್ಟು ಬರ್ತೇನೆ ನಡೀರಿ" ಎಂದು ಜೊತೆಯಾಗಿ ಬಂದಿದ್ದ.
ಮನೆಯಲ್ಲಿ, ಮಂಜಯ್ಯ... ಕತ್ತಲಾಗಿ ಇನ್ನೂ ಮಗಳು ಬರಲಿಲ್ಲವೆಂದು.. ಟಾರ್ಚ್ ಹಿಡಿದು ತಾವೇ ಕರೆದು ಬರಲು ಹೊರಟಿದ್ದರು... ದಾರಿಯಲ್ಲಿ ಒಬ್ಬರಿಗೊಬ್ಬರು ಮಾತಾಡಿಕೊಂಡು ಬರುತ್ತಿರುವ ಮಗಳು ಮತ್ತು ಪಕ್ಕದ ತೋಟದ ಹಸ್ಲರ ಅಣ್ಣಯ್ಯ ನನ್ನು ಕಂಡು.. ದೂರ್ವಾಸರಾಗಿದ್ದರು. ಎದುರಿಗೆ ಅಪ್ಪನನ್ನು ಕಂಡು ...ಸ್ವಭಾವತ ಭಯಸ್ಥೆಯಾದ ಶೀಲಾ... ಗಾಬರಿಯಿಂದ... "ಅಪ್ಪ...ಅದೂ ಅದೂ... " ಅಂದಿದ್ದಳು.
ಅಣ್ಣಯ್ಯ ಇದ್ಯಾವುದರ ಪರಿವೆ ಇಲ್ಲದೆ.. "ನಂಸ್ಕಾರ ಅಯ್ಯ, ಕತ್ತಲಾಗಿತ್ತು ಅಂತ ಅವ್ವೊರ್ನ ಮನಿಗೆ ತಲುಪಿಸೋಣ ಅಂತ ಬರ್ತಿದ್ದೆ... ನಾನಿನ್ನು ಬರ್ತಿನಯ್ಯ" ಅಂತ... ನಮಸ್ಕರಿಸಿ ಹಿಂತಿತುಗಿದ್ದ.
ಆದರೆ... ಮಂಜಯ್ಯ ಅರ್ಥಯಸಿದ್ದೇ ಬೇರೆ... " ಹಸ್ಲರ ಮುಂಡೆ ಮಕ್ಕಳಿಗೆ, ಬ್ರಾಹ್ಮಣರ ಹೆಣ್ ಮಕ್ಕಳ ಮೇಲೆ ಕಣ್ಣಾ ಕೋಷ್ಟು ಸೊಕ್ಕು ಬಂದದೇನು...., ಆ ಮಲ್ಲಿಕಾರ್ಜೂನುಂಗೆ ಹೊಡಿಬೇಕು... ಹಸ್ಲರ ಮಕ್ಕಳು ಓದಬೇಕಂತ.. ಓದಿ... ಏನು ಗುಡ್ಡೆ ಹಾಕಬೇಕಂತ... ಇವನ್ನ ಶಾಲಿ ಗೆ ಕಳಿಸಿದನೋ..." ಅಂತ ದಾರಿಯುದ್ದಕ್ಕೂ.. ಸಿಡಿಗುಟ್ಟತ್ತಲೇ ಬಂದಿದ್ದರು.
"ಇಲ್ಲಪ್ಪ... ಕತ್ತಲಗಿತ್ತು ಅಂತ... ಮನೆಯವರೆಗೂ ಬಿಡ್ತೇನೆ ಅಂತ ಬಂದ ಅಷ್ಟೇ...ಅವನು... ಇದುವರೆಗೂ... ನನ್ನೊಟ್ಟಿಗೆ ಮಾತಾಡಿದ್ದೆ ಇಲ್ಲ....."ಎಂದು ಹೇಳ ಹೊರಟವಳನ್ನು ತಡೆದು "ನೀ ಸುಮ್ನಿರು ಕೂಸೇ... ಇವೆಲ್ಲಾ ಹೀಂಗೆ ಚಿಗರ ಕಂಡು... ಒಂದಿನ ನಮ್ಮ ಬ್ರಾಹ್ಮಣರ ಹೆಣ್ ಮಕ್ಕಳ ತಲೆ ಕೆಡಸಿ... ಮದುವೆ ಆಗೋಕ್ಕು ಹೇಸವೊಲ್ಳ... ಕಳ್ಳ ಜಾತಿ ನನ್ಮಕ್ಕಳು" ಎಂದು ಬುಸುಗುಟ್ಟಿದ್ದರು.
ನಂತರ ಅದೇನು ಮಾಡಿದರೋ.. ಅಣ್ಣಯ್ಯ ಕಾಲೇಜನಿಂದ.. ಡಿಬಾರ್ ಆಗಿದ್ದ.. ಅದು... ಯಾವುದೌ ಹುಡುಗಿಯನ್ನು ಛೇದಿಸಿ ...ಮಾನಭಂಗ ಮಾಡಲೆತ್ನಿಸಿದ್ದಾನೆಂಬ ಆಪಾದನೆ ಮೇಲೆ.....! ಯಾರಾ ಹುಡುಗಿ ಅನ್ನೋ ನಿಜ ಇಂದಿಗೂ ಗೊತ್ತಿಲ್ಲ.. ಇದೆಲ್ಲವನ್ನೂ ಮಾಡಿಸಿದ್ದು ಮಂಜಯ್ಯ ಅಂತ ಮಾತ್ರ ಖಾತ್ರಿ ಆಗಿತ್ತು ಶೀಳಾಳಿಗೆ... ನನ್ನಿಂದಾಗಿ ಅವನ ವಿದ್ಯೆ... ಜೀವನ ಹಾಳಾಯ್ತು ಅನ್ನೋ ಕೊರಗಲಿ... ಶೀಲಾ...ಪಟ್ಟ ವೇದನೆ ಅಷ್ಟಿಷ್ಟಲ್ಲ..
ಶೀಲಾಗೆ ಅಪ್ಪನ ಬಗ್ಗೆ ಅಸಹ್ಯ...ಹೇಸಿಗೆ... ಬೇಸರ... ಅವರತ್ತ ಸುಳಿಯುವುದು ಇಲ್ಲ.... BSc ಮುಗಿಸಿ... ಬೆಂಗಳೂರಿನಲ್ಲಿ, ಕೆಲಸದಲ್ಲಿದ್ದಾಳೆ. ತಾಯಿಗಾಗಿ ಊರಿಗೋಗಲು ಮನ ಹಂಬಲಿಸಿದರೂ.. ಅಪ್ಪನ ಮುಖ ನೋಡಲು.. ಮನ ಹಿಂಜರಿಯುತ್ತದೆ...
ಆದರೆ ಇತ್ತೀಚ್ಗೆ... ಮಂಜಯ್ಯ... ಜರ್ಜರಿತರಾಗಿದ್ದಾರೆ... ಮುಪ್ಪಿನ ಕಾಯಿಲೆ... ಮಗಳಿಗೆ ಮದುವೆ ಮಾಡಬೇಕೆಂಬ ಹಂಬಲ ವಾದರೆ... ಕಡ್ಡಿ ತುಂಡು ಮಾಡುವಂತೆ ಮಾತಾಡುವ ಶೀಲಾ ಮದುವೆಗೆ ಒಪ್ಪುತ್ತಿಲ್ಲ.
ಶೀಲಾಳ, ತಾಯಿಯೂ ಒಮ್ಮೊಮ್ಮೆ ಮಗಳ ಮೇಲೆ ರೇಗಿದ್ದುಂಟು "ಕೂಸೇ... ನಿನ್ನದು ಅತೀ ಆಯ್ತು... ನಿನ್ನ ಅಪ್ಪಯ್ಯ ಅವರು..ನಿನ್ನ ಮೇಲಿನ ಪ್ರೀತಿಗೆ ಹೇಳತಾರೆ... ನಿನಗೆ.. ಮಾತಾಡಲು... ಪುರುಸೊತ್ತಿಲದಂಗೆ ಆಡ್ತಿಯಲ್ಲೇ...ನಿಜ...ಅವರು ಕೋಪಿಷ್ಟನೇ ಆದರೆ... ಮಗಳೆಂಬ ಪ್ರೀತಿ ಕೊಡೋದು ನಿನ್ನ ಕರ್ತವ್ಯ ಅಲ್ಲೇನು"... ಅಂತ...
"ಯಾರ್ರೀ ...ಮೂಡು ಬಿದ್ರೆ... "ಅನ್ನೋ ಕಂಡಕ್ಟರ್ ದ್ವನಿ ಕೇಳಿ.. ಎದ್ದು ನಿಂತ ಶೀಲಾ... ತನ್ನ ಬ್ಯಾಗೆತ್ತಿಕೊಂಡು ಇಳಿದಳು... ಥರಾಗುಟ್ತಿಸುವ ಚಳಿಗೆ ದುಪ್ಪಟ್ಟಾ ಮತ್ತಷ್ಟು ಗಟ್ಟಿಯಾಗಿ ಸುತ್ತಿಕೊಂಡು, ಅತ್ತಿತ್ತ ನೋಡಿದಳು.. ಯಾವುದು... ಆಟೋ ಕಾಣಲಿಲ್ಲ... ಸರಿ... ಬೆಳಗಾಗುವರೆಗೂ...ಬಸ್ಸ್ಟ್ಯಾಂಡ್ ನಲ್ಲೇ ಕಾಯುವುದೆಂದು ಅತ್ತ ನಡೆಯ ಬೇಕೆನಿಸುವಷ್ಟರಲ್ಲೇ...
"ಕೂಸೇ..." ಅಪ್ಪನ ಧನಿ... ಮಫ್ಲೆರ್ ಸುತ್ತಿ ಸ್ವೆಟರ್ ತೊಟ್ಟ ಅಪ್ಪ, ಆ ಡಿಸೆಂಬರ್ ಚಳಿಲಿ ನಡುಗುತ್ತಾ ನಿಂತಿದ್ದರು.. ಆ ಕನ್ನಡಕದ ಹಿಂದಿದ್ದ ಕಂಗಳಲ್ಲಿ ಪ್ರೀತಿಯ ಸೆಲೆ...ಮತ್ತಷ್ಟು ದೇಹ ಬಾಗಿತ್ತು.. ಜರ್ಜರಿತವಾಗಿದ್ದರು.
ಜೊತೆಯಲ್ಲೇ.. ಅನತಿ ದೂರದಲ್ಲಿ... ಹಸ್ಲರ ಕಾನನ ಮಗ... ಸಣ್ಣ......! ಗಾಡಿಯೊಂದಿಗೆ ಕೈ ಕಟ್ಟಿ ನಿಂತಿದ್ದ. ಶೀಲಾಳಿಗೆ ಪ್ರೀತಿಯುಕ್ಕಿತು ಅಪ್ಪನ ಮೇಲೆ..."ಅಪ್ಪಾ...." ಅನ್ನುತ್ತಾ ಅವರೆಡೆಗೆ ನಡೆದಳು...
"ಬಂದ್ಯಾ ಕೂಸೇ.. ಏನೂ ತ್ರಾಸಾಗಿಲ್ಲ ಅಲ್ಲ.. ನಿಮ್ಮವ್ವ ಹೇಳಿದ್ಲು.. ನೀ ಬೆಳಗ್ಗೇನೇ ಬರ್ತಿ ಅಂತ.. ಅದಕ್ಕೆ ಹೊಂಟು ಬಂದೆ" ತಲೆ ನೇವರಿಸಿದ ಅಪ್ಪನತ್ತ.. ಇಷ್ಟು ದಿನ ತೋರದ ತನ್ನ ಪ್ರೀತಿಯ ನೋಟ ಬೀರಿದಳು ಶೀಲಾ....
ಪೂರ್ವದಲ್ಲಿ ಸೂರ್ಯ.. ತನ್ನ ದಿನಚರಿಯ ಪ್ರಾರಂಬಿಸಲು ತಯಾರಿ ನಡೆಸಿದುದರ ಕುರುಹಾಗಿ... ಬಾನೆಲ್ಲ ಕೆಮ್ಪೆತ್ತಿತ್ತು.....
ನಿಮ್ಮಅನಿಸಿಕೆ ,ಸಲಹೆ .. ಟೀಕೆ.. ಟಿಪ್ಪಣಿಗಳಿಗೆ.. ಸದಾ ಸ್ವಾಗತ..
ಬರಹ ಚನ್ನಾಗಿದೆ.....
ReplyDeleteಬರೀತಾ ಬರೀತಾ ಇನ್ನೂ ಚನ್ನಾಗಾಗುತ್ತೆ.....
Thank u.....keep visiting :-)
ReplyDelete