Friday, 29 May 2015

ಹೀಗೂ ಒಂದು ಕಾಲೇಜ್ ತಮಾಷೆ....:-)


ನಾನು MBA  ಮಾಡುತ್ತಿದ್ದ ದಿನಗಳು,  POM(production and operations management) ಅನ್ನೋ  ಸಬ್ಜೆಕ್ಟ್ ಇತ್ತು, ಆ ಸುಬ್ಜೆಕ್ಟೇ ಬೋರೋ ಇಲ್ಲ ಆ ಸಬ್ಜೆಕ್ಟ್ ಟೀಚ್ ಮಾಡೋ ಪ್ರೊಫೆಸರ್ ಬೋರ್ ಮಾಡ್‌ಸ್ತಿದ್ದರೋ.. ಗೊತ್ತಿಲ್ಲ, ಆದ್ರೆ ನಿದ್ದೆ ಮಾತ್ರ.. ತುಂಬಾ ಬರೋದು. ಮೊದಲೇ  ಕ್ಲಾಸ್ ನಲ್ಲಿ ಕುಳಿತ್ಕೊಳ್ಳೋದು ಸೆಕೆಂಡ್ ಬೆಂಚ್, ನಿದ್ದೆ ಹೇಗೆ ಮಾಡೋದು...?? ಅದಕ್ಕೆ ಒಂದು ಐಡಿಯಾ ಇತ್ತು ನಮ್ಮತ್ರ... ಅವರು  ಪಾಠ ಮಾಡೋವಾಗ, ಇಂಪಾರ್ಟೆಂಟ್ ಪಾಯಂಟ್ಸ್  ನೋಟ್ ಮಾಡ್ಕೊಳ್ತಿದ್ವಲ್ಲ, ಅದೇ ನೋಟ್ ಬುಕ್ಕಲ್ಲೀ, ಅವರ ಬಗ್ಗೆ ಕಾಮೆಂಟ್ ಬರೆದು ಪಾಸ್ ಮಾಡ್ತಿದ್ವಿ ಪಕ್ಕದೊರಿಗೆ, ಅವರು ಅವರ ಬುಕ್ ನನಗೆ ಕೊಡೋರು... ಅವರಿಂದ  ಅವರ ಪಕ್ಕದೊರಿಗೆ... ಹೀಗೆ..ಫರ್ಸ್ಟ್ ಬೆಂಚ್‌ಗೂ ಸೆಕೆಂಡ್ ಬೆಂಚ್‌ಗೂ ಬುಕ್ ಹರಿದಾಡೋದು.. ಜೊತೆಗೆ... ನಾನು ಬರೆದ ಕಾಮೆಂಟ್ ಗೆ ಅವರ ಕಾಮೆಂಟ್ ಸೇರಿಸುತ್ತಾ ಹೋಗೋರು... ಕೊನೆಗೆ ಆ ನೋಟ್ ಬುಕ್ ನನ್ನ ಹತ್ರ ಬರೋ ಅಷ್ಟೊತ್ತಿಗೆ... ದೊಡ್ಡ ಕತೇನೇ ಆಗಿರ್ತಿತ್ತು... ಮತ್ತೆ ನಾನು ಬರೆದ ಕಾಮೆಂಟ್ ಇಂದ ಕೊನೆಯವರು ಬರೆದ ಕಾಮೆಂಟ್ ಓದುವಷ್ಟರಲ್ಲಿ... ಸಿಕ್ಕಾಪಟ್ಟೆ ನಗು ಬಂದ್ಬಿಡ್ತಿತ್ತು...ಹೇಗೋ ತಡ್ಕೊಂಡು...ಮತ್ತೆ ಪಾಠಧ ಕಡೆ ಕಾನ್ಸೆಂಟ್ರೇಟ್ ಮಾಡ್ತಿದ್ವಿ. ಮತ್ತೆ ಹತ್ತು -ಹದಿನೈದು ನಿಮಿಷ ಆದ್ಮೇಲೆ ನಿದ್ದೆ ಎಳಿತಿತ್ತು..ಮತ್ತೆ ಅದೇ ರೀತಿ ಹೊಸ ಕಾಮೆಂಟ್ ಶುರು. 


ಕಾಮೆಂಟ್ ಏನಾದ್ರೂ ಆಗಿರ್ತಿತ್ತು, ಕೆಲವೊಮ್ಮೆ, ಆ ಪ್ರೊಫೆಸರ್ ನಿಂತಿರೋ ಪೋಸ್ ಬಗ್ಗೆ, ಅವರು pronounce ಮಾಡೋ ಕೆಲ ಪದಗಳ ಬಗ್ಗೆ ಹೀಗೆ ಸುಮಾರು  topics ಇರ್ತ ಇತ್ತು ನಮ್ಮಹತ್ರ..ಫರ್ಸ್ಟ್ two ಬೆಂಚ್ ಸ್ ನಲ್ಲಿ ನಾವು ಆಲ್‌ಮೋಸ್ಟ್ ಎಲ್ಲ ಕನ್ನಡ ಬರ್ತಿದ್ದ ಹುಡುಗಿಯರೇ ಇದ್ದದ್ದು, ಹಾಗಾಗಿ ನಾವು ಕಾಮೆಂಟ್ಸ್ ನಾ ಕನ್ನಡದಲ್ಲೇ ಬರೆದು, ಪಾಸ್ ಮಾಡ್ತ್ ಇದ್ದದ್ದು, ಸೊ ಬೇರೆ ಸ್ಟೇಟ್ ಹುಡುಗಿಯರಿಗೆ ಏನು ಗೊತ್ತಾಗ್ತಾ ಇರಲಿಲ್ಲ. 
ಹಾ... ಹೇಳೋದೇ ಮರೆತಿದ್ದೆ, ಫರ್ಸ್ಟ್ ಬೆಂಚ್‌ನಲ್ಲಿ ಒಬ್ಬ ಕಲ್ಕತ್ತಾ ಹುಡುಗಿ  Ms. ಬ್ಯಾನಾರ್ಜೀ ಕುಳಿತುಕೊಳ್ತ ಇದ್ದಳು, ಕಾಲೇಜ ಗೆ ಸೇರಿದ ಹೊಸದರಲ್ಲಿ, ನಾವು ಅವಳನ್ನು ನೋಡಿ.. ಗ್ಯಾರಂಟೀ ಇದು... ರಾಂಕ್  ಸ್ಟೂಡಂಟ್  ಅಂತ ಅಂದುಕೊಂಡಿದ್ವಿ( ಯಾವಾಗ್ಲೂ,, ಟೆಕ್ಸ್ಟ್ ಬುಕ್ಸ್ ನಲ್ಲೇ ಕಣ್ಣು, ದಪ್ಪ ದಪ್ಪ ಕನ್ನಡಕ ಬೇರೆ, ಯಾರತ್ರಾನೂ ಮಾತಾಡ್ತಾ ಇರಲಿಲ್ಲ, ಫರ್ಸ್ಟ್ ಬೆಂಚ್ ನಲ್ಲಿ ಫರ್ಸ್ಟ್ ಸೀಟ್) ಹೀಗಾಗಿ, ನಾವೂ ಸ್ವಲ್ಪ ಸೀರೀಯಸ್ ಆಗಿ ಇರ್ತಿದ್ವಿ ಅವಳ ಹತ್ರ. ಮತ್ತೆ lecturers ಪಾಠ ಮಾಡುವಾಗ ಅವರು ವಿವರಿಸೋ ಪ್ರತೀ ಪದನೂ... ನೋಟ್ ಬುಕ್ ನಲ್ಲಿ ಬರೆದುಕೊಳ್ಳೋಳು,(ನಾವೂ ಬರೆದು ಕೊಳ್ತಾ ಇದ್ವಿ ಓನ್ಲೀ.. ಇಂಪಾರ್ಟೆಂಟ್ ಪಾಯಂಟ್ಸ್ ಅಷ್ಟೇ.). ನಂತರ ಅವಳ ಬುಕ್  'ಸ್ವಲ್ಪ ಕೊಡು ನೋಡಿ ಕೊಡ್ತೀವಿ ಅಂದ್ರೆ... ಜಪ್ಪಯ್ಯ ಅಂದ್ರು ಕೊಡ್ತಾ ಇರಲಿಲ್ಲ', ಸರಿ ಬಿಟ್ಟಾಕು ಅಂತ ಕೇಳೋದು ಬಿಟ್ಟುಬಿಟ್ವಿ... ನಾವೇನು ಕಮ್ಮಿನಾ... ನಾವು ಚೆನ್ನಾಗಿ ಓದುತ್ತಿದ್ವಿ.. ನಮಗೂ ಈಗೊ ಇತ್ತು ಅಷ್ಟೋ ಇಷ್ಟೋ...:- ) 


ಇದೆಲ್ಲ ಫರ್ಸ್ಟ್ ಸೆಮೆಸ್ಟರ್  ನಲ್ಲಿ ನಡೆದಿದ್ದು. ಫರ್ಸ್ಟ್ ಸೆಮೆಸ್ಟರ್ ರಿಸಲ್ಟ್ ಬಂತು ನೋಡಿ... ನಮಗೆಲ್ಲ ಶಾಕ್... ಯಾಕೆ ಅಂತೀರಾ.... ನಮ್ಮ ರಿಸಲ್ಟ್ ನೋಡಿ... ಯಾಕಂದ್ರೆ... ನಮ್ಮ ಗ್ರೂಪ್ ನಲ್ಲಿ ಎಲ್ಲರೂ ಫರ್ಸ್ಟ್ ಕ್ಲಾಸ್, ನಾನೇ  highest ಗ್ರೂಪ್ ನಲ್ಲಿ (distinction  ಗೆ ಸ್ವಲ್ಪ ಮಾರ್ಕ್ಸ್ ಕಮ್ಮಿ ಆಗಿತ್ತು). ನಾವ್ಯಾರೂ ಇಷ್ಟು ಚೆಂದದ ರಿಸಲ್ಟ್ ಎಕ್ಸ್‌ಪೆಕ್ಟ್ ಮಾಡಿರಲಿಲ್ಲ. ಶಾಕ್ ಆಗಿದ್ದು ಇದಕ್ಕಲ್ಲ ಮಾರಾಯ್ರೆ....! ನಮ್ಮ  Ms. ಬ್ಯಾನಾರ್ಜೀ ಎಲ್ಲಾ ಸಬ್ಜೆಕ್ಟ್ ನಲ್ಲೂ ಫೇಲ್....ಏಳೂ ಸಬ್ಜೆಕ್ಟ್ನಲ್ಲಿ ಅದಕ್ಕೆ ಶಾಕ್... ಯಾರು ಅದರ ಬಗ್ಗೆ ಮಾತಾಡ್ಲಿಲ್ಲ, ಅಣಕಿಸಿಯೂ ಇಲ್ಲ. ಆದ್ರೆ ಪ್ರತಿ ಸಬ್ಜೆಕ್ಟಿಗೂ ಅವಳ ಹತ್ರ ಲೆಕ್ಚರರ್ ರೆಫರ್ ಮಾಡಲು ಹೇಳಿದ ಎಲ್ಲಾ ಟೆಕ್ಸ್ಟ್ ಬುಕ್ಸ್ ಇತ್ತು... ಅದೇ ಆಶ್ಚರ್ಯ... ನನ್ನ ಹತ್ರ ಅಂತೂ ಒಂದು ಟೆಕ್ಸ್ಟ್ ಇರಲಿಲ್ಲ. ನನ್ನ ಪೂರ   MBA ನಾ ನಾನು ಒಂದು ಟೆಕ್ಸ್ಟ್ ಬುಕ್ ತೆಗೆದು ಕೊಳ್ಳದೆ, ಕಾಲೇಜ್ ಗೆ ಟಾಪರ್ ಆಗಿ ಪಾಸ್ ಮಾಡಿದ್ದು  ನನಗೆ ಹೆಮ್ಮೆಯ ವಿಷಯ. 


ಹಾ.. ಹಾ....  ಈಗ ಮೊದಲಿನ ವಿಷಯಕ್ಕೆ ಬರ್ತೇನೆ... ನಾವು ಕಾಮೆಂಟ್ ಬರೆದು ಪಾಸ್ ಮಾಡಲಿಕ್ಕೆ ಶುರು ಮಾಡಿದ್ದು ಸೆಕೆಂಡ್ ಸೆಮೆಸ್ಟರ್ ಇರುವಾಗ,(ನಾವು ಸ್ವಲ್ಪ ಚಿಗುರ್‍ಕೊಂಡಿದ್ವಿ, ಫರ್ಸ್ಟ್ ಸೆಮೆಸ್ಟರ್ ಆದ್ರೆ ಸ್ವಲ್ಪ ಭಯ ಇರುತ್ತೆ  ಅಲ್ವಾ... ಹಾಗಾಗಿ ಆಗ ಕಾಮೆಂಟ್ಸ್ ಪಾಸ್ ಮಾಡ್ತಿರಲಿಲ್ಲ), ಹಂಗಂತ ಎಲ್ಲ ಕ್ಲಾಸ್ ನಲ್ಲೂ ಹೀಗೆ ಮಾಡ್ತಿದ್ವಿ ಅನ್ಕೋಬೇಡಿ... only in POM class. 
ಸರಿ ಸುಮಾರು ದಿನ ಹೀಗೆ ನಡೀತು... ಒಂದು ದಿನ  ಕ್ಲಾಸ್ ತುಂಬಾನೇ ಬೋರಿಂಗ್ ಇತ್ತು.. ನಿದ್ದೆ.. ಅಂದ್ರೆ ನಿದ್ದೆ  ಎಳೀತಾ ಇತ್ತು  ಲಂಚ್ ಪೀರಿಯಡ್ ಆದ ಮೇಲೆ ಮೊದಲನೇ  ಕ್ಲಾಸ್ ಬೇರೆ, ಹೊಟ್ಟೆಯೊಳಗಿನ  ಊಟ ನಮ್ಮೆಲ್ಲರ ಮೇಲೆ ದ್ವೇಷ ತೀರಿಸಿಕೊಳ್ತಾ ಇತ್ತು. ಸರಿ ನಾನೇ ಕಾಮೆಂಟ್ ಬರೆಯಲು ಶುರು ಮಾಡಿದೆ, ಆ ಪ್ರೊಫೆಸರ್ ಯಾವಾಗ್ಲೂ ಸ್ಟೇಜ್ ಮೇಲೆ ನಿಂತು ಪಾಠ ಮಾಡುವಾಗ, ತಮ್ಮ ದೇಹವನ್ನು  ಸ್ವಲ್ಪ ಸೊಟ್ಟಕ್ಕೆ ಇಟ್ಟು ನಿಂತು, ಎಡ ಕೈ ಸೊಂಟದ ಮೇಲೆ ಕೈ ಇಟ್ಟುಕೊಂಡು explain  ಮಾಡೋರು... ನಂಗ್ಯಾಕೋ.. ಅವತ್ತು ಅದು ಥೇಟ್ ಬೇಲೂರು ಶೀಲಾ ಬಾಲಿಕೆ ತರ ಕಾಣಿಸಿಬಿಡ್ತು......:-), ಅದನ್ನೇ ಬರೆದು ಪಾಸ್ ಮಾಡಿದೆ 'ಆಹಾ.. ನೋಡಿರೇ ನಮ್ಮಬೇಲೂರು ಶೀಲಾ ಬಾಲಿಕೆನಾ.. ನೋಡಲು ಎರಡೂ ಕಣ್ಣೂ ಸಾಲ್ತ ಇಲ್ಲ'  ಅಂತ.. ಸರಿ ಪಾಸ್ ಆಯ್ತು ನನ್ನ ನೋಟ್ ಬುಕ್. ನನ್ನ ಪಕ್ಕದಲ್ಲಿದ್ದೋರು ಹೇಗೋ ನಗು ತಡೆದುಕೊಂಡು... ತಮ್ಮ ಕಾಮೆಂಟ್ ನಾ ಬರೆದು ಪಾಸ್ ಮಾಡುದ್ರು.. ಆದ್ರೆ  ಫರ್ಸ್ಟ್ ಬೆಂಚ್ ನಲ್ಲಿದ್ದ ಶರ್ಲೀ(Shirley) ಗೆ ನಗು ತಡೆಯೋಕೆ ಆಗಲಿಲ್ಲ, ಕೈ ಬಾಯಿಗಡ್ಡ ಇತ್ತು ನಕ್ಕೆ ಬಿಟ್ಲು ಸ್ವಲ್ಪ ಜೋರಾಗೇ, ಅವಳ ಕಡೆಯೇ  ನೋಡ್ತಾ ಇದ್ದ ನನ್ನ ಮುಖದ ಮೇಲೂ ಮಂದಹಾಸ, ಕಾಮೆಂಟ್ ಬರೆದ ನನ್ನ ಬಗ್ಗೆಯೇ ಹೆಮ್ಮೆ, ಪ್ರೊಫೆಸರ್ ನನ್ನ ಕಡೆ ನೋಡಿದ್ರು,  "why are you smiling, is there any joke??? ",  ಅಂದ್ರು, ನಾನು ಸ್ವಲ್ಪ ತಡಬಡಾಯ್ಸಿ, "no sir, nothing" ಅಂದೆ, ಅಷ್ಟರಲ್ಲಿ ನನ್ನ ನೋಟ್ ಬುಕ್ ನಾ ಮುಂದಿನ ಬೆಂಚ್ ನಿಂದ ಇನ್ನೊಂದು ಹುಡುಗಿ ಅವಳೆಲ್ಲಿ ಸಿಕ್ಕಿ ಹಾಕಿಕೊ ಬೇಕಾಗುತ್ತೋ ಅನ್ನೋ ಭಯದಲ್ಲಿ  ನನ್ನ ಕೈಲಿ ಕೊಟ್ಳು....:-(   

ಅಷ್ಟೇ , ಪ್ರೊಫೆಸರ್ ಗೆ  ಅರ್ಥ ಆಯ್ತು.. "ho.. your passing comments on me, is this what you do during the class hours" ಅಂದ್ರು... ನಂಗೋ.. ಕಿವಿಎಲ್ಲಾ  ಬಿಸಿ ಆಗೋಯ್ತು ಭಯದಿಂದ, ಅವರೆಲ್ಲಿ ನನ್ನ ನೋಟ್ ಬುಕ್ ಇಸ್ಕೊಂಡು ನೋಡ್ತಾರೋ ಅಂತ, ಸದ್ಯಕ್ಕೆ ಆ ಮಹಾನುಭಾವರು ಸ್ಟೇಜ್ ಇಂದ ಇಳಿದು ಬರಲೇ ಇಲ್ಲ. ನಾನು ಬಚಾವ್, "sorry sir " ಅಂದೆ, ಆವರಿಗೆ ಏನು ಅರ್ಥ ಆಯ್ತೋ... ಇಲ್ಲ ತಮ್ಮ ಕಾಲೇಜ್ ಡೇಸ್ ನೆನಪಾಯ್ತೋ... ಸುಮ್ಮನಾದ್ರು.  


ಯಪ್ಪಾ.... ಅವತ್ತೇ ಲಾಸ್ಟ್... ಅವರ ಕ್ಲಾಸ್ ನಲ್ಲಿ ಕಾಮೆಂಟ್ ಬರೆದು ಪಾಸ್ ಮಾಡೋ ಕೆಲಸಕ್ಕೆ ರಾಜೀನಾಮೆ ಕೊಟ್ಟೆ. ಆದ್ರೂ... ಬೇಲೂರು ಶೀಲಾ ಬಾಲಿಕೆ... ಯಾವಾಗ್ಲೂ... ನೆನಪಾಗುತ್ತೆ... ಆಗೆಲ್ಲ ಆ ಪ್ರೊಫೆಸರ್ ,,, ಆ ಕ್ಲಾಸ್. ಎಲ್ಲಾ ನೆನಪಾಗುತ್ತೆ. ಯಾಕೋ...ಈ  ತಮಾಷೆ ನಾ ನಿಮ್ಮೊಂದಿಗೆ ಹಂಚಿಕೋಬೇಕನ್ನಿಸಿತು  ಪೋಸ್ಟ್ ಮಾಡಿದೆನೆ.... ನಿಮಗೂ... ನಗು ಬಂದ್ರೆ ನಕ್ಕು ಬಿಡಿ... ಮತ್ತೆ ಕಾಮೆಂಟ್ ಮಾಡೋದ್ನ ಮರೀಬೇಡಿ....:-)

Happy weekend everyone....:-) 


Wednesday, 27 May 2015

ಸ್ವಾರ್ಥಿ.....! ಭಾಗ 3


ಸ್ವಾರ್ಥಿ.....! ಭಾಗ 3


 ಮುಂದುವರೆದ ಭಾಗ.....
ಪ್ರಕಾಶಯ್ಯನ ಕಾಟ ತಾಳಲಾರದೆ ಶಿಲ್ಪಾ, ಕೆಲಸಕ್ಕೆ ಸೇರಿದ್ದಳು. ಆಫೀಸ್ನಾ ಕ್ಯಾಬ್ ಫೇಸಿಲಿಟೀ ಇದ್ದರೂ, ಬೇಡ ನಾನೇ ಡ್ರಾಪ್ ಮಾಡ್ತೀನಿ, ನನಗೆ on the way ,ಅಂತ ದಿನಾ ಡ್ರಾಪ್ ಮಾಡಲು ಶುರು ಮಾಡಿದ್ದ ಪ್ರಕಾಶಯ್ಯ, ಆತ 30  ವರ್ಷದಿಂದ two wheeler ಓಡಿಸುತ್ತಿದ್ದರೂ , ಇನ್ನೂ ಸರಿಯಾಗಿ ಬರದು, ನಾಲ್ಕೂವರೆ ಅಡಿಯ ಮನುಷ್ಯ.. ಶಿಲ್ಪಾಳಿಗೆ ಸಾಕು ಸಾಕಾಗಿ ಹೋಗುತ್ತಿತ್ತು, ನಾನೇ ಡ್ರೈವ್ ಮಾಡ್ತೀನಿ ಅಂದ್ರು ಕೇಳದ ಮನುಷ್ಯ.. ದಾರಿಯಲ್ಲಿ ಯಾವುದಾದರೂ ಹುಡುಗಿಯೋ, ಹೆಂಗಸೋ ಕಂಡರಂತೂ ಕೇಳುವುದೇ ಬೇಡ... ದೃಷ್ಟಿ ಆಕಡೆ.  


'ಸರಿ ಹೆಂಡತೀನ ಮೇಲೆ ಕಳಿಸಿದ್ದಾಯ್ತು, ನನ್ನನ್ನೂ ಕಳಿಸಿ ಪುಣ್ಯ ಕಟ್ಟಿಕೊ ತಂದೆ ' ಅನ್ನೋ ಪ್ರಾರ್ಥನೆ ಮಾಡುತ್ತಿದ್ದಳು ಶಿಲ್ಪಾliterally.  ಅಂತೂ ಇಂತೂ ಶಿಲ್ಪ 6 ತಿಂಗಳು ಕೆಲಸ ಮಾಡುವಲ್ಲಿ, ಸುಸ್ತಾಗಿದ್ದಳು, ಮನೆಯಲ್ಲಿ ಕಾಡುವ ಪ್ರಕಾಶಯ್ಯ, ಸಂಜೆ 6 ಕ್ಕೆಲ್ಲಾ ಮನೆಯಲ್ಲಿರಬೇಕು, ಇಲ್ಲ ವಾದರೆ ನೂರಾರು ಕ್ರಾಸ್ ಕ್ವೆಸ್ಚನ್ಸ್. 'ತಾನು ಕಳ್ಳ, ಪರರನ್ನು ನಂಬ' ಅನ್ನೋ ಹಾಗೆ, ಅದೇನು ಸರ್ಕಾರಿ ಆಫೀಸ್ ಕೆಟ್ಟೋಯ್ತೆ, 6 ಕ್ಕೆಲ್ಲಾ ಮನೆಯಲ್ಲಿರಲು... 


ಸೊಸೆ ಇಲ್ಲದಿದ್ದಾಗ, ಕೇಶವನ ಮುಂದೆ, 'ತನ್ನಂಥ ತಂದೆಯೇ ಇಲ್ಲ ನಾನು ನನ್ನ ಜೀವನ ನಾ ಮುಡುಪಾಗಿಟ್ಟಿರೊದೆ ನಿಮಗೋಸ್ಕರ', ಅನ್ನೋ ರೀತಿ build up, brain wash.....ಹೂ...ಕೇಶವನೂ ಸರಿ, ಮೊದಲೇ ಮುಗ್ದ, ತಂದೆ ಹೇಳಿದ್ದಕ್ಕೆಲ್ಲ ಸೈ. ಶಿಲ್ಪಾ ಏನಾದರೂ ಮಾವನ ಬಗ್ಗೆ ಹೇಳಲು ಹೋದರೆ..'ನೀನ್ಯಾಕೆ ಅವರಿಗೆ ಸರಿಯಾಗಿ ಉತ್ತರಿಸೊಲ್ಲ, ಮುಖ ಯಾಕೆ ಒರಟಾಗಿ ಇಟ್ಟುಕೋತಿಯ, ಅವರು ಏನೇ ಇರಲಿ, ನಿನ್ನ ಕರ್ತವ್ಯ ಮಾಡು' ಅನ್ನೋ ಭಾಷಣ ಕೇಳಿ ಕೇಳಿ, ಶಿಲ್ಪ... ರೋಧಿಸಿದ್ದು ಎಷ್ಟೋ ಸಲ. ಗಂಡ ಹೆಂಡಿರ ಮಧ್ಯೆ ಜಗಳ ತಂದಿತ್ತು ತಮಾಷೆ ನೋಡುವುದರಲ್ಲೂ ಎತ್ತಿದ ಕೈ ಪ್ರಕಾಶಯ್ಯ..ನೀವೆಲ್ಲಾದರೂ ಇಂಥ ತಂದೆ ಉರುಫ್ ಮಾವ ನನ್ನು ನೋಡಿದ್ದೀರಾ(ಮಾವ ಇರಬಹುದೇನೋ...ಆದ್ರೆ ತಂದೆ)......??


4 ವರ್ಷಗಳ ಕಾಲ ಸಹಿಸಿದ ಶಿಲ್ಪ, ಹೇಗೋ ಬೇರೆ ಹೋಗಲು ಕೇಶವನನ್ನೂ ಒಪ್ಪಿಸಿದ್ದಾಗಿತ್ತು, ಅಡ್ವಾನ್ಸ್ ಕೂಡ ಕೊಟ್ಟಾಗಿತ್ತು ಹೊಸ ಮನೆಗೆ ಹೋಗಲು, ಲೀಸ್ ಮೇಲೆ . ಶಿಲ್ಪ ತವರು ಮನೆಗೆ ಹೋದಾಗ, ಪ್ರಕಾಶಯ್ಯ , ಕೇಶವನ ತಲೆ ಮತ್ತೆ brain wash ಮಾಡಿದ್ದರು, 'ಲೀಸ್ ದುಡ್ಡನ್ನು ಮನೆ ಬಿಡುವಾಗ ಕೊಡದ್ದಿದ್ದರೆ ಏನು ಮಾಡ್ತೀರಿ....? ಒಂದಲ್ಲ , ಎರೆಡಲ್ಲಾ  ಹತ್ತು ಲಕ್ಷ.. ..!ಹಾಗೆ ಹೀಗೆ....., ಅದೇ ಹತ್ತು ಲಕ್ಷ ನನಗೆ ಕೊಡಿ, ನಾನೆಲ್ಲಾದ್ರೂ ಅಪಾರ್ಟ್ಮೆಂಟ್ ಮೇಲೆ ಇನ್‌ವೆಸ್ಟ್ ಮಾಡ್ತೀನಿ, (ಈ ಮನುಷ್ಯನಿಗೆ ಇರೋದೂ ಕೊಟ್ಟು ಮುಂಡ ಮೊಚ್ಕೊಳ್ಳಬೇಕಾಗಿತ್ತಂತೆ)... ' ಅಂತ ಫುಲ್ ತಲೆಗೆ ಬೆಣ್ಣೆ ತಿಕ್ಕಿದಾನೆ, ಕೇಶವನು ತಿಕ್ಕಿಸಿಕೊಂಡಿದಾನೆ. ತಾಯಿ ಮನೆಯಲ್ಲಿದ್ದ ಶಿಲ್ಪ ಅಳುತ್ತಲೇ ಬಂದಿದ್ದಳು, ಫೋನ್ ಮೂಲಕ ಗಂಡ ಬೇರೆ ಹೋಗುವುದು ಬೇಡವೆಂದಾಗ.  

ಅಂತೂ ಇಂತೂ ... ಗಂಡನನ್ನು ಒಲಿಸಿ...ಓಲಾಡಿ ಹೊಸ ಮನೆಗೆ ಬಂದಿದ್ದಾಗಿತ್ತು.. ಶಿಲ್ಪ... ಏನನ್ನು ಹೆಚ್ಚಿಗೆ ಆ ಮನೆಯಿಂದ ತಂದಿರಲಿಲ್ಲ. ಶಿಲ್ಪಾ ಸ್ವಲ್ಪ ನೆಮ್ಮದಿಯ ಉಸಿರು ಬಿಡುವಂತಗಿತ್ತು.... ಆದರೂ ಬೆಂಬಿಡದ ಪಿಶಾಚಿ ಪ್ರಕಾಶಯ್ಯ, ದಿನ ರಾತ್ರಿ ಉಟಕ್ಕೆ ಹಾಜರ್, ಅದೇ ರಾಗ ಆದೆ ತಾಳ, ಅನ್ನಸಾರ ಲ್ಲಿ ಏನು ಸಿಕ್ಕೊಲ್ಲ, ಚಪಾತಿ  ಜೀರ್ಣ ಆಗೋಲ್ಲ., ಮಣ್ಣು ಮಸಿ.. ಶಿಲ್ಪ ಈಗ ಅದಕ್ಕೆಲ್ಲ ಕೇರ್ ಮಾಡೊಲ್ಲಾ... ತಿಂದರೆ ತಿನ್ನಲಿ ಬಿಟ್ಟರೆ ಬಿಡಲಿ... ಮೈದುನ ಮಾತ್ರ.. ದಿನ ಊಟ ಮಾಡಿಯೇ ಹೋಗ್ತಾನೆ.... ಸದ್ಯಕ್ಕೆ ಅಪ್ಪನೊಂದಿಗೆ ಇದ್ದಾನೆ... ದಿನವೂ ತಂದೆಯ ಬಗ್ಗೆ ದೂರುತ್ತಾನೆ ಅತ್ತಿಗೆಯ ಬಳಿ,'ನನಗಿನ್ನೂ, ಈಗ 26 ವರ್ಷ ಮದುವೆಯಾಗು ಅಂತ ಪ್ರಾಣ ತಿಂತಾರೆ ಅತ್ತಿಗೆ.... ನಾನು ರೂಮ್ ಮಾಡಿಕೊಂಡು  ಹೋಗ್ತೀನಿ ಅಂತ' ಶಿಲ್ಪ ಎಲ್ಲದಕ್ಕೂ ಈಗ ನಿರ್ಲಿಪ್ತೆ.


4 ವರ್ಷದಿಂದ ತನ್ನ ತನವನ್ನೇಕಳೆದುಕೊಂಡಿದ್ದ ಶಿಲ್ಪ.. ಈಗ.. ಮತ್ತೊಮ್ಮೆ ತನ್ನನ್ನು ರೂಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ಅಷ್ಟರಲ್ಲೇ.. ತಾನು ತಾಯಾಗುವ ಸುದ್ದಿ..'ok ... no problem ಇನ್ನೊದು ವರ್ಷ, ತಾಯ್ತನದ ಸವಿ ಸವಿದು... ಕರಿಯರ್ ಬಗ್ಗೆ ಯೋಚಿಸಿದರೆ ಆಯಿತೆಂದು' , ನವಮಾಸಗಳು ಕಳೆದು, ಈಗ ಮುದ್ದಾದ ಮಗುವಿನ ತಾಯಾಗಿದ್ದಾಳೆ.

ನನಗೂ ನಾಮಕರಣದ ಕರೆಯೋಲೆ ಬಂದಿದೆ....ಹೋಗಿ ಬರ್ತೇನೆ.....




ನಿಮ್ಮ ಸಲಹೆ ಅನಿಸಿಕೆಗಳಿಗೆ ಸ್ವಾಗತ.. ಕಾಗುಣಿತ ದೋಷವಿದ್ದಲಿ ದಯೆಇಟ್ಟು ಕ್ಷಮಿಸಿ.

Monday, 25 May 2015

ಸ್ವಾರ್ಥಿ ....! ಭಾಗ 2

 

ಸ್ವಾರ್ಥಿ ....! ಭಾಗ 2 

 ಆದರೆ ಸ್ವಲ್ಪ ದಿನದಲ್ಲೇ ಪ್ರಕಾಶಯ್ಯನ ನಿಜ ರೂಪ ಅನಾವರಣಗೊಂಡಿತ್ತು ಹತ್ತಿರದ ನೆಂಟರ ಮೂಲಕ, ಅದಕ್ಕೆ ಶಿಲ್ಪಾಳಿಗೆ ಬಂದ ಅನುಮಾನವೇ ಕಾರಣ, ಸದಾ ಮೊಬೈಲ್ ನಲ್ಲಿ ಮೆಸೇಜ್ ಹಾಗೂ ಮಾತಾಡುತ್ತಿರುವ ಆ ಮನುಷ್ಯನ ಮೇಲೆ.. ತುಂಬಾನೇ ಅನುಮಾನ ಬಂದಿತ್ತು. ನಂತರ, ಒಮ್ಮೆ ಆತನ ರೂಮಿನ ಮುಂದೆ ಕಸ ಗುಡಿಸುವಾಗ ಒಳಗಿನಿಂದ ಕೇಳಿ ಬಂದ ಮಾತುಗಳು... 'ಇಲ್ಲ ಚಿನ್ನಾ, ಬಂಗಾರ, ನಾನು ಸ್ವಲ್ಪ ಬ್ಯುಸಿ ಇದ್ದೇ ಅದಕ್ಕೆ ಬರೋದಿಕ್ಕೆ ಆಗಲಿಲ್ಲ,  ಇವತ್ತು ರಾತ್ರಿ ಬರ್ತೀನಿ ಬಿಡು... ಏನು ಬೇಕು ಅಂತ ಮೆಸೇಜ್ ಮಾಡು ತಂದು ಕೊಡ್ತೀನಿ, ಲವ್ ಯೂ  ಚಿನ್ನಿ"  ಎಂಬ ಸಂಭಾಷಣೆ ಕೇಳಿ ಬಂದಿತ್ತು, ಆದರೂ ಅದರ ಬಗ್ಗೆ  ಜಾಸ್ತಿ ವಿವರಣೆ ಇಲ್ಲದಿದ್ದರಿಂದ ಸುಮ್ಮನಾಗಿದ್ದಳು. ನಂತರ ಒಮ್ಮೆ ಪ್ರಕಾಶಯ್ಯ ಸ್ನಾನಕ್ಕೆ ಹೋಗಿದ್ದಾಗ ಮೊಬೈಲ್  ಚೆಕ್ ಮಾಡಿದ್ದಳು, ಆಗ ಸಿಕ್ಕಿತ್ತು ಲವ್ ಮೆಸೇಜ್ ಗಳು... ಫೋಟೋಗಳು,. ಆಕೆಯೊಂದಿಗೆ ತೆಗಿಸಿಕೊಂಡ ಹೋಟೆಲ್ ರೂಮಿನ ಫೋಟೋಗಳು... ಇನ್ನೇನು ಬೇಕಿತ್ತು ಸಾಕ್ಷಿಗೆ. ನಂತರ ಆ ಫೋಟೋಗಳನ್ನು ಗಂಡನಿಗೂ ತೋರಿಸಿದ್ದಳು. ಗಂಡನೂ... ಆತನ  ರಾಸಲೀಲೆ ಹೇಳಿದ್ದ,  ಹತ್ತಿರದ ನೆಂಟರಲ್ಲಿ  ಸೂಕ್ಷ್ಮವಾಗಿ ವಿಚಾರಿಸಿದಾಗ  ತಿಳಿದು ಬಂದ ಸುದ್ದಿ ಕೇಳಿ , ಶಿಲ್ಪ ಹೌಹಾರಿದ್ದಳು. 

'ಪ್ರಕಾಶಯ್ಯ, ಹೆಣ್ಣುಗಳ ಕಾಯಲಿ ಮನುಷ್ಯ, ಈಗಲೂ ಇಬ್ಬರು , ಮೂವರು ಗರ್ಲ್‌ಫ್ರೆಂಡ್ ಗಳು ಇದ್ದರು. ತಮ್ಮ ಹೆಂಡತಿ ಇದ್ದಾಗಲೇ, ಮತ್ತೊಬ್ಬ ಮಗಳ ವಯಸ್ಸಿನ ಹುಡುಗಿಯನ್ನು ಹೆಂಡತಿಯ ಮುಂದೆಯೇ ಮದುವೆಯಾಗಿ ಕರೆತಂದಿದ್ದರು ( ಕೇಶವ ಮತ್ತು  ಮೈದುನ, ತಮ್ಮ 17ನೇ ವಯಸ್ಸಿನಿಂದಲೇ , ಬೇರೆ ಇದ್ದರು ಓದುವ ಹಾಗೂ ಕೆಲಸದ ಸಲುವಾಗಿ). 


ನಂತರ, ಮಕ್ಕಳಲ್ಲಿ ಹೇಳಿ ಕೊಂಡಿದ್ದು,' ಆ ಹುಡುಗಿಗೆ ಯಾರು ಇಲ್ಲ ಹಾಗಾಗಿ ಮನೆಯಲ್ಲಿ ನಿಮ್ಮ ತಾಯಿಗೆ ಸಹಾಯವಾಗಲಿ ಅಂತ ತಂದಿಟ್ಟುಕೊಂಡಿರುವುದಾಗಿ ಕಥೆ ಕಟ್ಟಿದ್ದರು'. ಕೇಶವನ ತಾಯಿಯೂ ಮಕ್ಕಳ ಬಳಿ ಹೇಳಿರಲಿಲ್ಲ, ಪ್ರಕಾಶಯ್ಯ, ಆಕೆಯನ್ನು ಮಕ್ಕಳಲ್ಲಿ ಒಂಟಿಯಾಗಿ ಮಾತಾಡಲು ಬಿಟ್ಟರೆ ತಾನೇ....!.
ಕೆಲ ದಿನಗಳ ನಂತರ, ಚಿಕ್ಕ ಹೆಂಡತಿಯ ಮೋಹಕ್ಕೆ ಒಳಗಾದ ಪ್ರಕಾಶಯ್ಯ, ಹೆಂಡತಿಯನ್ನು ಬಲವಂತ ಮಾಡಿ ರಾತ್ರಿ 12 ಗಂಟೆಯಲ್ಲಿ, ಕೆಲಸವಿದೆ, ನಮ್ಮ ಆಫೀಸ್ quatrous ಗೆ ಹೋಗ ಬೇಕೆಂದು ಕರೆದುಕೊಂಡು ಹೋಗಿದ್ದರು, ಅದರ ಹಿಂದಿದ್ದ ಉದ್ದೇಶ ದೇವರಿಗೆ ಗೊತ್ತು... ಹೋಗುವ ರಸ್ತೆಯಲ್ಲಿ... ಆಕ್ಸಿಡೆಂಟ್ ನಲ್ಲಿ, ಅವರ ಪತ್ನಿ ಸ್ಥಳದಲ್ಲೇ ಆಸು ನೀಗಿದ್ದರೆ, ಈ ಮನುಷ್ಯ ಮಾತ್ರ ಏನೂ ಆಗದೆ, ಗುಂಡು ಕಲ್ಲಿನ ಹಾಗೆ ಪಾರಾಗಿದ್ದರು ಕಾಲಿಗೆ ಫ್ರ್ಯಾಕ್ಚರ್ ಆಗಿತ್ತಷ್ಟೆ. ಆದರೆ, ಇಂದಿಗೂ ಆ ಆಕ್ಸಿಡೆಂಟ್ ಒಂದು.. ಅನುಮಾನಾಸ್ಪದ ವಿಷಯವೇ ಎಲ್ಲರಿಗೂ. 


ತಾಯಿಯ ಸಾವಿನ ನಂತರವೇ ಮಕ್ಕಳಿಗೆ ತಿಳಿದದ್ದು, ತಮ್ಮ ಅಪ್ಪನ ರಾಸ ಲೀಲೆ..!, ಮಕ್ಕಳಿಬ್ಬರೂ ಏನು ಹೇಳಿರಲಿಲ್ಲ... ಹೇಳುವುದಾದರೂ ಏನು... ಕೇಳಿದರೆ, 'ನಿಮ್ಮ ಅಮ್ಮನಿಗೇ ಏನೂ ಅಭ್ಯಂತರ ವಿರಲಿಲ್ಲ'  ಎಂದಿದ್ದನಂತೆ. ಯಾವ ಹೆಣ್ಣೆ ಆಗಲಿ, ತನ್ನ ಮುಂದೆಯೇ, ಇನ್ನೊಬ್ಬ ಹೆಣ್ಣನ್ನು ಮದುವೆಯಾಗುವುದು ಸಹಿಸಿಯಾಳೇ, ಸಂಸಾರ ಮಾಡುವುದನ್ನು ಪ್ರೋತ್ಸಾಹಿಸಿಯಾಳೇ.....??. ಪ್ರಕಾಶಯ್ಯನ ಕಾಮುಕ ,ಅಸಭ್ಯ ಕಾಟ ತಾಳಲಾರದೆ ಒಪ್ಪಿರಬೇಕಷ್ಟೆ. ಶಿಲ್ಪಾಲಿಗೆ, ಮದುವೆಯಾದ ಹೊಸದರಲ್ಲಿ ಆತನ ರೂಮ್ ಕ್ಲೀನ್ ಮಾಡುವಾಗ ದೊರೆತ ಕಾಮಸೂತ್ರ ಬುಕ್ಸ್, ಮತ್ತಷ್ಟು ಅದೇ ರೀತಿಯ ಬುಕ್ಸ್ ದೊರೆತದ್ದೇ ಸಾಕ್ಷಿ,
ಮತ್ತೆ ಚಿಕ್ಕ ಹೆಂಡತಿಯ ಮಾತು ಕೇಳಿ ಇದ್ದ ಮನೆ ಮಾರಿದ್ದು ಆಯಿತು, ಮಕ್ಕಳು ಒಂದೂ ಮಾತು ಕೇಳದೆ ಹೋಗಿ ಸೈನ್ ಮಾಡಿ ಬಂದಿದ್ದರು(ನನಗನಿಸುವುದು... ಇಂಥ ಮಕ್ಕಳೂ ಇರುವರೆ... ಅಂತ....! ಅವರ ಮೇಲೆ ಶಿಲ್ಪಾಳಿಗೆ ಹೇಳಿದ ದೂರಿಗೆ ಲ್ಲೆಕ್ಕವಿಲ್ಲ). ಬಂದ 50 ಲಕ್ಷದಲ್ಲಿ, ಒಂದು ಪೈಸೆಯೂ ಉಳಿದಿಲ್ಲ , ಚಿಕ್ಕ ಹೆಂಡತಿ ಎಲ್ಲವನ್ನೂ ಬಾಚಿಕೊಂಡು... ಟೋಪಿ ಹಾಕಿ ಪರಾರಿಯಾಗಿದ್ದು ಆಯ್ತು.... ಇಷ್ಟು ದಿನ ಅವಳಿದ್ದಳು.
ಸೊಸೆ ಯಾಕೆ ಬೇಕಾಯಿತೆಂದರೆ.. ಮನೆಯಲ್ಲಿ ಕೂಳು ಹಾಕಲು ಯಾರೂ ಇರಲಿಲ್ಲ.. ಮತ್ತು ನೆಂಟರ ಮುಂದೆಲ್ಲ ಮಾನ ಮೂರು ಕಾಸಿಗೆ ಹರಾಜಾಗಿತ್ತು. ಮಕ್ಕಳನ್ನು  ಹೋಗಿ ಗೋಗರೆದು... ಹೇಗೂ. ಮದುವೆಯೂ ಮಾಡಿಸಿದ್ದಾಯ್ತು... ಅಣ್ಣನ  ಮಾತಿಗೆ ಬೆಲೆ ಕೊಟ್ಟು ಮೈದುನ ಬಂದುಜೊತೆಯಲ್ಲಿ ಇರಲಾರಂಬಿಸಿದ್ದ.ಆದರೆ ಅವನಿಗೆ ತಂದೆಯ ಬಗ್ಗೆ ಒಂದಿನಿತೂ ಗೌರವ ಉಳಿದಿರಲಿಲ್ಲ.ಅತ್ತಿಗೆಯನ್ನು ಗೌರವಿಸುತ್ತಿದ್ದ.


ಕೇಶವನೇ, ತನ್ನ ಕರ್ತವ್ಯ ಎಂದು.. ತಂದೆಯನ್ನು ನೋಡಿಕೊಳ್ಳುತ್ತಿದ್ದ. ಆದರೆ ಆತನಿಲ್ಲದಿದ್ದಾಗ, ಸೊಸೆಯ ಮುಂದೆ ತನ್ನ ಬಾಲ ಬಿಚ್ಚಿ, ಅವಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದ ಈ ಪ್ರಕಾಶಯ್ಯ.


ಇನ್ನೂ ಇದೆ.. ......
ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ಬರೆಯಿರಿ... ಕಾಗುಣಿತ ದೋಷಗಳನ್ನು ತಿದ್ದುವ  ಪ್ರಯತ್ನ ಮಾಡುತ್ತಲೇ ಇದ್ದೇನೆ. ದೋಷಗಳು ಕಂಡಬಂದಲ್ಲಿ ಮನ್ನಿಸಿ 

Monday, 18 May 2015


ಸ್ವಾರ್ಥಿ......! ಭಾಗ 1


"ನಿಮ್ಮ ಮದುವೆಗೆ 18 ಲಕ್ಷ ಖರ್ಚಾಯ್ತು ಎಲ್ಲ ಸೇರಿ..., ಆದ್ರೆ ನೀನೇನು ತಲೆ ಕೆಡಿಸಿಕೋಬೇಡ, ನಾನು ನನ್ನ ಪೆನ್ಷನ್ ಮೇಲೆ ಸಾಲ ತಗೊಂಡಿರೋದು, ಆದ್ರೆ ಪೆನ್ಷನ್ ನಲ್ಲಿ ಒಂದೂ ಪೈಸೆ ಉಳಿಯೋಲ್ಲ ಅಷ್ಟೇ.." ಎಂದ ಮಾವನತ್ತ (ಗಂಡನ ತಂದೆ) ಬೆರಗಿನಿಂದ ನೋಡಿದಳು ಶಿಲ್ಪ, ಇನ್ನೂ ಮದುವೆಗಚ್ಚಿದ ಮೆಹಂದಿ ಅಳಿಸಿರಲಿಲ್ಲ ಕೈಗಳಲ್ಲಿ, ಹರಿಶಿಣದ ಛಾಯೆ ಮುಖದಲ್ಲಿ. 'ಏನು ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡದಕ್ಕೆ , ನನಗೆ 5 ರೇಶಿಮೆ ಸೀರೆ ಒಂದು ಮಾಂಗಲ್ಯ ಚೈನ್ ಮಾಡಿಸದ್ದಕ್ಕೆ 18 ಲಕ್ಷದ ಲೆಕ್ಕ' ಹೇಳುತ್ತಿದ್ದರಲ್ಲಾ ಎಂದು ಗಾಬರಿಗೊಂಡ ಮುಖದಿಂದ ಮಾವನ ಕಡೆ ನೋಡಿದಳು, ಗಿಡ್ಡನೆಯ., ಸೊಟ್ಟ ಮೂಗಿನ..ಗೆಡ್ಡೆ ಕಣ್ಣಿನ ಪರಮೇಶಯ್ಯ, ದೊಡ್ಡನೆ ಕಪ್ಪಿನಲ್ಲಿದ್ದ  ಕಾಫಿ ಸೊರ ಸೊರ ಹೀರುವುದರಲ್ಲಿ ಮಗ್ನರಾಗಿದ್ದರು.


ಮದುವೆಯಾದದ್ದಗಲಾಯ್ತು, ಯಾಕೋ ಈ ಮನುಷ್ಯನ ನಡತೆಯಲ್ಲಿನ ಬದಲಾವಣೆ ಎತ್ತಿ ತೋರುತ್ತಿತ್ತು, ಮದುವೆಯಾಗುವವರೆಗೂ, ತನ್ನಂಥ ಒಳ್ಳೆಯವನೇ ಇಲ್ಲ, ನಾನು ನನ್ನ ಜೀವನಾನ ಮುಡುಪಾಗಿಟ್ಟಿರೋದೇ ನನ್ನ ಇಬ್ಬರು ಮಕ್ಕಳಿಗೆ ಅಂತ ಪಾಡುತ್ತಿದ್ದ ಮನುಷ್ಯ ಈಗ, ನಾನು ನನ್ನಿಂದಲೇ ಮನೆ ನಡಿಯುತ್ತಿರೋದು, 'ನಿನ್ನ ಗಂಡ ಮದುವೆಗೆ ಮೊದಲು ಇಷ್ಟು ಕಾಟ ಕೊಟ್ಟ, ನಿನ್ನ ಮೈದುನ ಇಷ್ಟು ಕಾಡಿದ. ಅವರಿಗಾಗಿ ಇಷ್ಟು ಖರ್ಚುಮಾಡಿದ್ದೇನೆ ಇದುವರೆಗೂ' ಅಂತ, ತಾನು ಬರೆದಿದ್ದ ಚೀಟಿ ತೋರಿಸೋದು,

"ನಿನ್ನ ಗಂಡ, ಮದುವೆಗೆ ಮೊದಲು, ತನ್ನ ಸೋಶಿಯಲ್ habits ಬಗ್ಗೆ ಹೇಳಿದಾನ" ಎಂದ ಮಾವನತ್ತ ಮತ್ತೊಮ್ಮೆ ಬೆಚ್ಚಿ ನೋಡಿದಳು, "ಯಾವದರ ಬಗ್ಗೆ ಹೇಳ್ತಿದೀರಾ?" ಎಂದು ಗೊತ್ತಿದ್ದೂ ಎಂದಳು, "ಏನು ಇಲ್ಲ ಬಿಡು", ಎಂದು ಮತ್ತೆ ಪೇಪರ್‌ನಲ್ಲಿ ಮುಖ ಹುದುಗಿಸಿದ ಮಾವನತ್ತ, ನಿಜಕ್ಕೂ ಭಯದಿಂದ ನೋಡಿದಳು.(ನಿಜಕ್ಕೂ, ಗಂಡ ಮದುವೆಗೆ ಮೊದಲು ಫೋನ್ ಮಾಡಿ ಹೇಳಿದ್ದ, ತಾನು ಸ್ಮೋಕ್ ಮಾಡುವುದಾಗಿ) ಆದರೆ, ಇಲ್ಲಿ ಅದನ್ನು ಮುಚ್ಚಿಟ್ಟು ಮತ್ತೆ ಸೋಗಿನ ಮುಖ ತೋರಿದ ಮಾವನತ್ತ ಸಿಟ್ಟೇರಿತು.


"ನೀನು, ಕೇಶವನಿಗೆ ಫೋನ್ ಮಾಡಿ ಅವನನ್ನ ಒಲಿಸಿಕೊ, ಅವನಿಗೆ ಫೋನ್ ಮಾಡು ನಿನ್ನ ಹೆಸರು ಜಪ ಮಾಡುವಷ್ಟು ಅವನಿಗೆ ನಿನ್ನ ಹುಚ್ಚು ಹಿಡಿಸು" ಈ  ರೀತಿಯ ಮಾತುಗಳನ್ನಾಡಲು ದಿನಕ್ಕೆ ನಾಲ್ಕೈದು ಸಲ ಫೋನ್ ಮಾಡಿ ತಲೆ ತಿನ್ನುತ್ತಿದ್ದ ಪ್ರಕಾಶಯ್ಯ. ಆಗೆಲ್ಲ ಶಿಲ್ಪಾಲಿಗೆ, ತಲೆ ಕೆಡುತ್ತಿತ್ತು, ಪರಿಚಯದವರ ಮೂಲಕ ಬಂದ ಸಂಭಂಧವಿದು, ಮನೆಯವರಿಗೆಲ್ಲ ಇಷ್ಟವಾಗಿದ್ದು ಒಂದೇ ಕಾರಣಕ್ಕೆ, ಅತ್ತೆ ಇಲ್ಲದ ಮನೆ,  ಮಗಳು ಸುಖ ವಾಗಿದ್ದಾಳೆಂದು, ಜೊತೆಗೆ  ಪ್ರಕಾಶಯ್ಯನ ಬಣ್ಣದ ಮಾತುಗಳು...! 'ಸ್ವಂತ ಮನೆ ಇತ್ತು, ಆದರೆ  ಹೆಂಡತಿ ಅಪಘಾತ ಒಂದರಲ್ಲಿ ತೀರಿಕೊಂಡಿದ್ದರಿಂದ, ತನಗೆ ಆ ಮನೆಯಲ್ಲಿ ಇರಲು ಇಷ್ಟ ವಾಗದೆ ಮಾರಿದ್ದೇ 50 ಲಕ್ಷ ಕ್ಕೆ, ನನಗೆ ಇನ್ನೂ 3 ವರ್ಷ ಸರ್ವಿಸ್ ಇದೆ, ತಿಂಗಳಿಗೆ ಅರವತ್ತು ಸಾವಿರ ಸಂಬಳ, ರಿಟೈರ್ಮೆಂಟ್ ನಲ್ಲಿ, 20 ಲಕ್ಷ  ವರೆಗೂ ಬರುತ್ತೆ ವಗೈರ ವಗೈರ....' ಮದ್ಯಮ ವರ್ಗದ ಕುಟುಂಬದವರಾದ ಶಿಲ್ಪ ರ ತಂದೆ ತಾಯಿಗೆ , ಮಗಳು ಸುಖವಾಗಿದ್ದಾಳೆಂದು ಅನಿಸಿದ್ದರಲ್ಲಿತಪ್ಪಿಲ್ಲ. ಆದರೆ ಮಗನನ್ನು ಕರೆದುಕೊಂಡು ಬಾರದೆ ಇಷ್ಟು ವರಾತ ತೆಗೆದಿದ್ದ  ಪ್ರಕಾಶಯ್ಯ. (ನಂತರ ತಿಳಿದು ಬಂದಿದ್ದು ಅವರ ಮಗ ಕೇಶವನಿಗೆ, ಮದುವೆಯೇ ಇಷ್ಟವಿರಲಿಲ್ಲ, ಈ ಮನುಷ್ಯ ಮಾತ್ರ ಶಿಲ್ಪಾಳಿಗೆ ಬೆಂಬಿಡದ ಬೇತಾಳನ ಹಾಗೆ ಜೋತು ಬಿದ್ದಿದ್ದ).


ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ಶಿಲ್ಪ, ಪ್ರಕಾಶಯ್ಯನಿಗೆ ಒರಟಾಗಿ ಉತ್ತರಿಸಬೇಕೆಂದು ಬಾಯಿಗೆ ಬರುತ್ತಿದ್ದ ಮಾತುಗಳನ್ನು ತಡೆ ಹಿಡಿದ್ದಿದ್ದಳು ಹಿರಿಯರೆಂಬ ಗೌರವದಿಂದ, ಆದರೆ ಯಾವಾಗ, ಕಾಟ ತಡೆಯದವಾಳಾದಳೋ ಹೇಳಿದ್ದಳು,"ನಿಮ್ಮ ಮಗನಿಗೆ ಮದುವೆಯಾಗಲು ಇಷ್ಟ ವಿಲ್ಲದ ಮೇಲೆ, ನನ್ನ ಪ್ರಾಣ ಯಾಕೆ ತೆಗೀತಿರಿ, ನನ್ನ ಮದುವೆಯ ಬಗ್ಗೆ ತಲೆ ಕೆಡಿಸಿ ಕೊಳ್ಳಲು ನನ್ನ ತಂದೆ ತಾಯಿ ಇದ್ದಾರೆ, ತಾವು ದಯವಿಟ್ಟು ನನಗೆ ಫೋನ್ ಮಾಡ್ಬೇಡಿ "ಎಂದು ಉಗಿದ ಮೇಲೆ ಸುಮ್ಮನಾಗಿದ್ದರು.


ಮನೆಯವರೆಲ್ಲ ಈ ಸಂಭಂದದ ಬಗ್ಗೆ ನಿರ್ಲಕ್ಷ ತಳೆದು 4 ತಿಂಗಳೇ ಕಳೆದು ಹೋಗಿತ್ತು, ಧಿಡೀರೆಂದು ಶಿಲ್ಪಳ ಮೊಬೈಲಿಗೆ ಕೇಶವನಿಂದ ಮೀಟ್ ಮಾಡಬೇಕೆಂದು ಮೆಸೇಜ್ ಬಂದಾಗ, ಮೊದಲಿಗೆ ಸುಮ್ಮನಾಗಿದ್ದಳು, ನಂತರ ಕಾಲ್ ಮಾಡಿಯೂ ಮೀಟ್ ಮಾಡುವ ಬಗ್ಗೆ ಕೇಳಿದಾಗ, ತಂದೆ ತಾಯನ್ನು ಕೇಳಿ ಹೇಳುವುದಾಗಿ ಹೇಳಿ, ತಾಯಿಂದ ಅಪ್ಪಣೆ ಪಡೆದು ಮೀಟ್ ಮಾಡಿದ್ದಳು ಕೆಫೇ ಕಾಫೀ ಡೇ ನಲ್ಲಿ, ಕೇಶವ ಅಪ್ಪನಂತೆ ವಿಲಕ್ಷನವಾಗಿರದೆ, ಹ್ಯಾಂಡ್‌ಸಮ್ ಆಗಿದ್ದ, 5'8 ಇಂಚಿನ ಕೇಶವ ಸುಂದರ, ಸುಶೀಲ, ಸಂಭಾವಿತ, "ನನಗೆ ಮದುವೆಯಾಗಲು ಇಷ್ಟವಿರಲಿಲ್ಲ, ಆದ್ರೂ ತಂದೆ ಒತ್ತಾಯದಿಂದ ಮಾಡಿದ ಫಜೀತಿಯ ಬಗ್ಗೆ ಸಾರೀ ಕೇಳಿದ, ನಂತರ 4 ತಿಂಗಳ ನಂತರವೂ, ಮದುವೆಯ ಸುದ್ದಿ ಬಂದಾಗ, ಕಣ್ಣ ಮುಂದೆ ತೇಲಿದ್ದು ನಿಮ್ಮ ಮುಖ, ಯಾಕೋ ನೀವೇ ಲೈಫ್ ಪಾರ್ಟ್ನರ್ ಆದ್ರೆ ಚೆನ್ನ ಅನ್ನಿಸಿತು" ಎಂದು ಸರಳವಾಗಿ ಮಾತಾಡಿದವ, ಶಿಲ್ಪಳ ಮನಸನ್ನುಕದ್ದಿದ್ದ. ಜಾತಕಗಳ ಒಂದಾಣಿಕೆ, ಮನೆಯವರ ಒಪ್ಪಿಗೆ, ಹದಿನೈದೇ ದಿನದಲ್ಲಿ ಮದುವೆ ಕೂಡ ಆಗಿಹೋಗಿತ್ತು.


ದೇವಸ್ಥಾನದಲ್ಲಿ ಮದುವೆಯನ್ನು ನಾವೇ ಮಾಡಿಕೊಳ್ಳುವುದಾಗಿ ಒತ್ತಿ ಒತ್ತಿ ಹೇಳಿದ ಪ್ರಕಾಶಯ್ಯ, ರಿಸೆಪ್ಶನ್ ಮಾತ್ರ ಹೆಸರಾಂತ ಪಾರ್ಟೀ ಹಾಲಿನಲ್ಲಿ ಶಿಲ್ಪಳ ತಂದೆಯೇ ಮಾಡಿ ಕೊಟ್ಟಿದ್ದರು.ಬಂದವರೆಲ್ಲ ಮೆಚ್ಚಿದ್ದರು ದಂಪತಿಗಳ ಜೋಡಿಯನ್ನು, ಮತ್ತು ರಿಸೆಪ್ಶನ್ ನಾ. ಹೀಗಿರುವಾಗ, ಮದುವೆಗೆ 18 ಲಕ್ಷ ಖರ್ಚಾಯ್ತು ಎಂದ ಪ್ರಕಾಶಯ್ಯನ ಬಗ್ಗೆ ಶಿಲ್ಪ ಭಯಗೊಂಡಿದ್ದರಲ್ಲಿ ತಪ್ಪೇನಿರಲಿಲ್ಲ,


ಮದುವೆಯ ನಂತರ ನಿಜವಾದ ಬಣ್ಣ ತೋರಿಸ ತೊಡಗಿದ್ದ ಪ್ರಕಾಶಯ್ಯ, ಬೆಳಗ್ಗೆ ತಿಂಡಿಗೆ ಅನ್ನ್ನದ ಐಟಮ್ ಬೇಡ, ಬರೀ ದೋಸೆ, ಇಡ್ಲಿ, ಚಪಾತಿ ಗಳೇ ಆಗಬೇಕು. ರಾತ್ರಿ ಅನ್ನಸಾರು ಮುದ್ದೆ  ಮಾಡಿದ್ದರೆ, ಅನ್ನ ಸಾರಿನಲ್ಲಿ ಏನು ಸಿಗುತ್ತೆ ಅಂತ, ಚಪಾತಿ ಪಲ್ಯ ಮಾಡಿದ್ದರೆ ಜೀರ್ಣ ಆಗೋಲ್ಲ ಎಂದು ಊಟವೇ ಮಾಡುತ್ತಿರಲಿಲ್ಲ, ಆಗೆಲ್ಲಾ ಶಿಲ್ಪ ಏನು ಮಾಡಬೇಕೆಂದು ಅರ್ಥವಾಗದೆ ಧುಖಿಸಿದ್ದಳು.ಗಂಡನ ಬಳಿ ತೋಡಿಕೊಂಡಾಗ "ಅವರಿಗೆ ಚೆನ್ನಾಗಿ ನಾಲಿಗೆಚಪಲ, ಹೋಟೆಲ್ ಊಟದ ಹುಚ್ಚು ಚೆನ್ನಾಗೇ ಹೊರಗೆ ತಿಂದು ಬಂದಿರ್ತಾರೆ, ನೀನೇನು ತಲೆ ಕೆಡಿಸಿಕೊಳ್ಳಬೇಡ, ನಿನಗೆ ಏನು ಬೇಕೋ ಅದೇ ಅಡುಗೆ ಮಾಡು"ಎಂದಿದ್ದ.


"ನನ್ನ ಹೆಂಡತಿ ಮಾಡಿದಾಗೆ ಯಾರಿಗೂ ಅಡಿಗೆ ಮಾಡಲು ಬರಲ್ಲ, ಎಲ್ಲಾ ತರದ ಅಡುಗೆ ಮಾಡೋಳು" ಎಂಬ ಮಾತು ಪ್ರತಿ ಬಾರಿ ಊಟ ಮಾಡುವಾಗಲೂ ಕೇಳಿ ಕೇಳಿ, ಶಿಲ್ಪಾಳಿಗೆ ಸಾಕಾಗಿ ಹೋಗಿತ್ತು. ತಾನು MBA  ಮಾಡಿ, ಒಂದು ದೊಡ್ಡ ಕೊಂಪನಿ ಯಲ್ಲಿ ಮ್ಯಾನೇಜರ್ ಆಗಿ ದುಡೀತಿದ್ದೋಳು, ಈಗ, ಆ ಕಂಪನಿ ದೂರ ಅಂತ, ಬಿಟ್ಟು ಹತ್ತಿರದಲ್ಲೇ ಕೆಲಸ ಹುಡುಕುತ್ತಿದ್ದಳು, ಶಿಲ್ಪಾ ಅಡುಗೆ ಮಾಡೋದರಲ್ಲಿ ಅಚ್ಚುಕಟ್ಟು, ರುಚಿ ಶುಚಿಯಲ್ಲಿ ಎರಡು ಮಾತಿಲ್ಲ, ಅಂತದ್ರಲ್ಲಿ  ಈ ಮನುಷ್ಯ ನಡೆಸೋ.. ದಬ್ಬಾಳಿಕೆ ನೋಡಿ ರೋಸಿಹೋಗುತ್ತಿದ್ದಳು.



ಇನ್ನೂ ಇದೆ ... ಭಾಗ 2   ನೀರಿಕ್ಷಿಸಿ

Saturday, 16 May 2015

ಓ ನೆನಪೇ.....


ಓ ನೆನಪೇ ನೀನೆಷ್ಟು ಸುಂದರ
ನೀ ಬರುವ ಆ ಘಳಿಗೆ ಅದೆಷ್ಟು ಮಧುರ
ನನ್ನಲ್ಲಿರುವ ನೀನು ಎಂದೆಂದಿಗೂ ಅಮರ.


ನೆನಪೇ ನೀ ಆಗಿರಬಹುದು ಕೆಲವರಿಗೆ
ಕಾಡುವ ಬೆಂಬಿಡದ ರಕ್ಕಸ
ನನಗೆ ಮಾತ್ರ ನೀ ಬರಲೇ ಬೇಕು ದಿನಕ್ಕೊಮ್ಮೆ
ಬಂದರೆ ತಂದೇ ತರುವೆ ಮರೆಯದೆ ಸಂತಸ.


ಆಗಿರಬಹುದು, ನೀ ಕೆಲವರ
ಪ್ರಾಣ ಹರಣಕ್ಕೆ ಕಾರಣ,
ಅಂತೆಯೇ ನಾ ಜೀವಂತವಿರುವುದಕ್ಕೂ
ಪರೋಕ್ಷವಾಗಿ ನೀನೇ ಕಾರಣ.


ನನ್ನೀ ಒಂಟಿ ಜೀವನದಲಿ
ಬಂದು ತೋರಿದೆ ನೀ ಆತ್ಮೀಯ ಅನುಭೂತಿ
ನೆನಪೇ, ನೀ ಅಂತೆಯೇ
ಕಲಿಸಿಕೊಟ್ಟೆ ಜೀವನದ ರೀತಿ-ನೀತಿ.


Wednesday, 13 May 2015

ಪ್ರಥಮ...???

"ಸೆಕೆಂಡ್ ಪೀ ಯು ಸೀ ರಿಸಲ್ಟ್ ಬಂದಿದೆ, ನೋಡೋಕ್ ಬರ್ತೀಯಾ" ಅಂತ ಫೋನ್ ಮಾಡಿದ್ದ ಗೆಳತಿಗೆ, "ಇಲ್ಲ ವಸಂತ, ನನ್ನ ತಮ್ಮ ಬೆಳಿಗ್ಗೇನೇ ಇಂಟರ್‌ನೆಟ್ ನಲ್ಲಿ ಚೆಕ್ ಮಾಡಿದಾನೆ, ನನ್ ಮಾರ್ಕ್ಸೆಲ್ಲ ಗೊತ್ತಾಗಿದೆ. ನೀನು ಹೋಗಿ ನೋಡಿಕೊಂಡು ಬಾ" ಎಂದೆಳೆ ಫೋನಿಟ್ಟೆ. 


ಕಾಲೇಜ್ ಗೆ ಸೆಕೆಂಡ್ ಹೈಯೆಸ್ಟ್, ಮಾರ್ಕ್ಸ್ ಸ್ಕೋರ್ ಮಾಡಿದ್ದರು ಯಾಕೋ.... ಎಂಜಾಯ್ ಮಾಡುವ ಸ್ತಿತಿಯಲ್ಲಿರಲಿಲ್ಲ.    ಥರ್ಡ್ ಕ್ಲಾಸ್ ನಲ್ಲಿ ಪಾಸ್ ಮಾಡಿದ್ದಾಗ ಮಾತಾಡಿಸದೆ ಇದ್ದ ಅಣ್ಣಾ (ಅಪ್ಪ), ಈಗ ತುಂಬಾನೇ ಖುಷಿಯಾಗಿದ್ರು.ಅಮ್ಮ ಅಕ್ಕ ಪಕ್ಕಾದೋರಿಗೆಲ್ಲ ಹೇಳಿ ಬಂದಿದ್ರು... ಆದ್ರೂ ಮನ ಅರಳಲೆ ಇಲ್ಲ.


ನಾನು..ಓದೋದ್ರಲ್ಲಿ ಫರ್ಸ್ಟ್ ರಾಂಕ್ ಸ್ಟೂಡೆಂಟ್ ಅಲ್ಲದಿದ್ರು.. ದಡ್ಡಿ ಅಂತೂ ಇಲ್ಲ. ಫರ್ಸ್ಟ್ ಕ್ಲಾಸ್ ಬರ್ತಾಳೆಅಂತ ಇದ್ದ ಅಣ್ಣನಿಗೆ, ನಾನು ಥರ್ಡ್ ಕ್ಲಾಸ್ ನಲ್ಲಿ sslc ಪಾಸ್ ಮಾಡ್ದಾಗ, ತುಂಬಾನೇ ಬೇಸರ ಆಗಿತ್ತು. ನನ್ನ ಮಾತೂ ಆಡಿಸಿರಲಿಲ್ಲ. ಅಮ್ಮ ನೂ ಚೆನ್ನಾಗಿ ಬೈದಿದ್ರು... ಆದ್ರೂ ಆಮೇಲೆ ಸಮಾಧಾನ ಮಾಡಿದ್ರು.... !ನಮ್ಮೂರಲ್ಲಿ ಫೇಲ್ ಆದಡ್ದ್ಕೆ ಒಬ್ಬಳು ಅತ್ಮಹತ್ಯೆ ಮಾಡಿಕೊಂಡಿದ್ದಳಲ್ಲ ಅದಕ್ಕೆ ಇರಬೇಕು ಅಂತ ಈಗ ಅನ್ನಿಸುತ್ತೆ.


ಸರಿ ಥರ್ಡ್  ಕ್ಲಾಸ್ ಗೆ ಸೈನ್ಸ್ ಗೆ ಯಾರು ಸೇರಿಸಿಕೊಳ್ತಾರೆ, ಆರ್ಟ್ಸ್ ಗೆ ಸೇರಿದ್ದಾಯ್ತು... ಯಾರ ಸಲಹೆಯೂ ಇಲ್ಲದೆ( ಅಣ್ಣಾ ಅಂತೂ... ಮಾತೇ ಆಡಿರಲಿಲ್ಲ). ಬೇರೆ ಬೇರೆ ಸ್ಚೂಲಿಂದ ಬಂದ ಹುಡುಗಿಯರೆಲ್ಲ ಗೆಳತಿಯರಾದರು ಕಾಲೇಜ್ ನಲ್ಲಿ..... ತುಂಬಾ ಆತ್ಮೀಯಳಾಗಿದ್ದು "ಶ್ರೀ ಲೇಖಾ'.


ಶ್ರೀ ಲೇಖ ಚೆಂದದ ಹುಡುಗಿ, ಓದುವುದರಲ್ಲೂ ... sslc ನಲ್ಲಿ, 75% ಇದ್ದರೂ ಆರ್ಟ್ಸ್ ಗೆ ಸೇರಿದ್ದ್ಳು. ನಂತರ ತಿಳಿದು ಬಂದದ್ದು , ಅವರದು ತೀರಾ ಬಡತನ, ತಂದೆ ದೇವಸ್ಥಾನ ದ ಅರ್ಚಕ, ಮೂರು ಮಕ್ಕಳು, ಮಡದಿಯ ಸಂಸಾರ ಅದರಲ್ಲೇ ತುಂಬ ಬೇಕಿತ್ತು. ಸೈನ್ಸ್ ಒದಿಸೂ ಶಕ್ತಿ ಇರಲಿಲ್ಲ ಆದರೂ ಓದುವ ಆಸಕ್ತಿ ಇಂದ ಆರ್ಟ್ಸ್ ಗೆ ಸೇರಿದ್ದಳು ಶ್ರೀ ಲೇಖ.
ನಾವಿಬ್ಬರೂ ತುಂಬಾ ಆತ್ಮೀಯರಾಗಿ ಬಿಟ್ಟೆವು, ಕೆಲವೇ ದಿನಗಳಲ್ಲಿ ನನಗೂ... ಚೆನ್ನಾಗಿ ಓದುವ ಆಸಕ್ತಿ ಹುಟ್ಟಿಕೊಂಡಿತ್ತು ಅವಳಿಂದಾಗಿ. ಅವ್ಳು ತುಂಬಾನೇ ಸಹಾಯ ಮಾಡ್ತಿದ್ಳುಕೂಡಾ .

ಆಗ ತಾನೇ ಹರೆಯಕ್ಕೆ ಕಾಲಿಟ್ಟಿದ್ದ ನಾವೆಲ್ಲರೂ... ಮದುವೆ, ಮದುವೆಯಾಗುವ ಹುಡುಗನ ಬಗ್ಗೆ ಕನಸು ಕಾಣುತ್ತಿದ್ದೆವು.. ಯಾವುದಾದರೂ ಒಂದು ಕ್ಲಾಸ್ ಇಲ್ಲದಿದ್ದಾಗ ಗುಂಪಾಗಿ ಕೂತು ಹರಟುತ್ತಿದ್ದೆವು... ಆದರೆ ಶ್ರೀ ಲೆಖಾ... ತನ್ನ ಕನಸಿನ ರಾಜಕುಮಾರ ನಾ ಬಗ್ಗೆ ಮಾತೆ ಆಡುತ್ತಿರಲಿಲ್ಲ...ಕೇಳಿದರೆ, "ಸದ್ಯ ನಾನು ಪೀ ಯು ಸೀ ಮುಗಿಸಿದರೆ ಸಾಕಾಗಿದೆ, ನಮ್ಮ್ಮ ಮನೆಯಲ್ಲಿ ಮದುವೆ ಮಾಡಿ ನನ್ನ  ಈಗಲೇ ಸಾಗಿ ಹಾಕೋಕೆ ರೆಡೀ ಯಾಗಿದರೆ... ಬೆನ್ನ ಹಿಂದೆ ಇರೋ ತಂಗೀರ ಚಿಂತೆ ನಮ್ಮಪ್ಪಂಗೆ" ಎನ್ನುತ್ತಿದ್ದಳು. ಅವರ ಮನೆಯ ಪರಿಸ್ಥಿತಿ ಅರಿವಿದ್ದ ನಾವ್ಯಾರೂ ಹೆಚ್ಚಿಗೆ ಪೀಡಿಸುತ್ತಿರಲಿಲ್ಲ.


ಅವತ್ಯಾಕೋ ಶ್ರೀ ಲೇಖ ತುಂಬಾನೇ ಸಪ್ಪಗಿದ್ದಳು, ಯಾಕೆ ಅಂತ ತುಂಬಾ ಸಾರಿ ಪೀಡಿಸಿ ಕೇಳಿದ್ದಕ್ಕೆ ಹೇಳಿದಳು," ನಮ್ಮನೆಲ್ಲಿ ನೆನ್ನೆ ನನ್ನ ನೋಡೋಕೆ ಯಾರೋ ಬಂದಿದ್ದರು ಕಣೆ, ಅವ್ರಿಗೆ ನಾನು ಒಪ್ಪಿಗೆ ಅಂತೇ, ಒಂದು ವಾರದಲ್ಲೇ ಮದುವೆ ಮಾಡಿಕೊಳ್ತರಂತೆ.... ನನ್ನ ಓದು ಅಷ್ಟೇ... " ಅಂತ ಅಳೋಕೆ ಶುರು ಮಾಡಿದೊಳನ್ನ ಹೇಗೆ ಸಮಾಧಾನ ಮಾಡ್ಬೇಕೋ ಗೊತ್ತಾಗಲೇ ಇಲ್ಲ."ನಂಗಿಸ್ಟ್ ಇಲ್ಲ ಅಂತ ಹೇಳು ನಿಮ್ ತಂದೆಗೆ, " ಅಂದೆ. "ಅದೆಲ್ಲ ನಡಿಯೋದಿಲ್ಲವೇ ನಮ್ಮ ಮನೆಲಿ, ನನ್ನ ಒಂದು ಮಾತೂ ಕೇಳೋಲ್ಲ ಇದ್ರ ಬಗ್ಗೆ" ಎಂದು ಸುಮ್ಮನಾದಳು. ನಾನೂ ಅಸಹಾಯಕಿ, ಏನು ಮಾಡಬೇಕು ತೋಚಲಿಲ್ಲ, ಅವಳೇ ಹೇಳಿದ್ಲು, "ಅವರ ಮನೆಯವರು, ತಮ್ಮ ಮನೆಯ ಫೋನ್ ನಂಬರ್ ಕೊಟ್ಟೋಗಿದಾರೆ ನಮ್ಮ ಅಪ್ಪನ ಕೈಲಿ, ನಾನೇ ಅವರ ಮನೆಗೆ ಅನಾಮಧೇಯ ಕಾಲ್ ಮಾಡಿ ಶ್ರೀ ಲೇಖಳ ಚಾರೆಕ್ಟೇರ್ ಚೆನ್ನಾಗಿಲ್ಲ ಅಂತ ಹೇಳಿಬಿಡ್ತೀನಿ, ಆಗ್ಲಾದ್ರೂ ಅವರು ನನ್ನ ಮದುವೆ ಆಗೋಕ್ಕೆ ಒಪ್ಪೊಲ್ಲ, ಅಸ್ಟರಲ್ಲಿ ನನ್ನ ಸೆಕೆಂಡ್ ಪೀ ಯು ಸೀ ಎಗ್ಸ್ಯಾಮ್ ಮುಗಿಯುತ್ತೆ, ನಾನೇ ಎಲ್ಲಾದ್ರೂ ಸ್ಚೂಲ್‌ನಲ್ಲಿ, ಟೀಚರ್ ಆಗಿ ಸೇರಿಕೋತೀನಿ, ನಮ್ಮ ಅಪ್ಪನಿಗೆ ಸ್ವಲ್ಪ ಸಹಾಯ ಆಗುತ್ತೆ" ಎಂದಳು.  ಅವಳ ಮಾತು ಕೇಳಿ ನನಗೆ ಭಯಾನೂ ಆಯ್ತು, "ಬೇಡ ಶ್ರೀ, ಒಂದು ಸಲ ನೀಂ ಅಮ್ಮನ ಹಥ್ರನಾದ್ರು ಮಾತಾಡಿ ನೋಡು" ಅಂದೆ. "ಇಲ್ಲವೇ, ಅವರಂತೂ, 'ನಿಮ್ಮ ಅಪ್ಪ ಹೇಳಿದಾಗೆ ಕೇಳೋಕೇನು ನಿಂಗ' ಅಂತ ನನ್ನೇ ಬೈತಾರೆ" ಅಂದವಳಿಗೆ, ಏನೂ ಸಹಾಯ ಮಾಡುವ ಸ್ಥಿತಿಯಲ್ಲಿರಲಿಲ್ಲ ನಾನು, ಸುಮ್ಮನೆ ಮನೆಗೆ ಬಂದಿದ್ದೆ.


ಮೂರು ದಿನದ ನಂತರ ಖುಷಿಯಾಗಿದ್ದ ಶ್ರೀಲೇಖಾ, ಹೇಳಿದ್ದಳು " ಲೇ, ಅವರು ನನ್ನ ಮದುವೆ ಆಗೋಕೆ ಇಸ್ಟ ಇಲ್ಲ ಅಂತ ಹೇಳಿಬೀಟ್‌ರು ಕಣೇ, ಸದ್ಯಕ್ಕೆ, ಯಾವುದೇ ತೊಂದ್ರೆ ಇಲ್ಲದೆ ಎಗ್ಸ್ಯಾಮ್ ಗೆ ಓದ್ಕೋಬಹುದು, ಒಂದು ಫೋನ್ ಕಾಲ್ ಎಸ್ಟೆಲ್ಲಾ ಬದಲಾಯಿಸ್ತು ನೋಡಿದಯ " ಎಂದವಳನ್ನು, ನೋಡಿ ವಿಚಿತ್ರವೆನಿಸಿತು, ಸದ್ಯ ಅವಳು ಖುಷಿಯಾದ್ಲಲ್ಲ ಅಷ್ಟು ಸಾಕೆನಿಸಿತ್ತು. 


ನಂತರ ಎಗ್ಸ್ಯಾಮ್ ಗಡಿಬಿಡಿಯಲ್ಲಿ, ನಾವಿಬ್ಬರೂ ಸಿಗುತ್ತಿದ್ದದ್ದೆ ಅಪರೂಪ, ಸಿಕ್ಕರೂ, ಪರೀಕ್ಷೆಯ ಬಗ್ಗೆಯೇ ಮಾತುಕತೆ. 


ನಂತರ ಇನ್ನೆರೆಡು ಎಗ್ಸ್ಯಾಮ್ ಇದೆ ಅನ್ನುವಾಗ, ಸಿಕ್ಕ ಶ್ರೀಲೇಖ, "ನಿನ್ನತ್ರ ಅರ್ಜೆಂಟಗಿ ಮಾತಾಡಬೇಕೆಂದಳು", ಸರಿ ಎಂದು ಇಬ್ಬರು , ಲೈಬ್ರರ್ರೀಯಲ್ಲಿ ಮಾತಾಡಲು ಕೂತೆವು, ಬಾಡಿದ್ದ ಅವಳ ಮುಖ ನೋಡಿ,"ಯಾಕೆ ಶ್ರೀ, ಇಸ್ಟೊಂದು ಓದುತ್ತಿದಿಯ, ನಿದ್ದೇನೆ ಮಾಡ್ತಿಲ್ಲ ಅನಿಸುತ್ತೆ  ಹೇಗಿದ್ದರೂ ನೀನೇ ಫರ್ಸ್ಟ್ ಬರೂದು ತಾನೇ" ಎಂದೇ.ಅದಕ್ಕವಳ ಕಣ್ಣಲ್ಲಿ, ಫಳಕ್ಕನೆ ಉದುರಿದ ಕಣ್ಣೀರನ್ನು ಕಂಡು ಘಾಬರಿಯದೆ,"ಯಾಕೆ ಶ್ರೀ, ಏನಾಯ್ತು ಹೇಳಮ್ಮಾ" ಎಂದೆ. 

ಆಕಡೆ ಈಕಡೆ ನೋಡಿ ಕಣ್ಣೀರೋರೆಸಿಕೊಂಡ ಅವಳು,"ನನಗೆ ಮದುವೆ ಫಿಕ್ಸ್ ಆಗಿದೆ ಕಾಣೆ, ಎಗ್ಸ್ಯಾಮ್ ಮುಗಿದ  ಹತ್ತು ದಿನಕ್ಕೆ ಮದುವೆ,  ಈ ಸಲ ಬಂದ ಗಂಡ...ಹಾ ಹ್ಹ ಹ್ಹ  ಹ್ಹ, ಗಂಡ ಅವನು, 45 ವರ್ಷದ ಮುದುಕ, ನನ್ನ ಅನಾಮಧೇಯ ಫೋನ್ ಕಾಲ್ ಗೂ ಹೆದರಲಿಲ್ಲ, ನನ್ನೇ ಮಧುವೆ ಆಗ್ತೀನಿ ಅಂತ ಕೂತಿದಾನೆ, ತುಂಬಾ ಸಾಹುಕಾರ, ನಾನು ಎರಡನೇ ಹೆಂಡತಿ, ನನ್ನ ವಯಸ್ಸಿನ ಮಗ ಇದಾನಂತೆ, ನನ್ನ ಮದುವೆ ಮಾಡಿಕೊಂಡು, ನನ್ನ ತವರು ಮನೆ ಉದ್ದಾರ ಮಾಡ್ತಾನಂತೆ, ನಮ್ಮಪ್ಪನ ತಲೆ ಚೆನ್ನಾಗಿ ಕೆಡಿಸಿ ಒಪ್ಪಿಸಿದನೇ, ನಮ್ಮಪ್ಪ ಮದುವೆ ಡೇಟ್ ಫಿಕ್ಸ್ ಮಾಡಿದ್ಧೂ ಅಯ್ತು'" ಎಂದಳು.ನನಗೂ ಅಳು ಬಂತು, "ಶ್ರೀ , ಏನೇ ಮಾಡೋದು ಈಗ" ಎಂದೆ. "ಏನೂ ಮಾಡೋ ಹಾಗಿಲ್ಲವೇ, ಎಲ್ಲಾದ್ರೂ ಓಡೋಗೋಣ ಅನ್ನಿಸುತ್ತೆ, ಆದ್ರೆ ಎಲ್ಲೊಗ್ಲೀ,...." ಮತ್ತೆ  ಅತ್ತಳು. ಏನೆಂದು ಸಮಾಧಾನ ಮಾಡಲಿ !!! ಸುಮಾರು  ಹೊತ್ತು ಸುಮ್ಮನಿಡ್ವಿ, "ಹೋಗ್ಲಿ ಬಿಡು ನನ್ನ ಹಣೆಲಿ ಬರೆದಾಗೆ ಆಗುತ್ತೆ ," ಎಂದು ನಿಟ್ಟಿಸುರು ಬಿಟ್ಟು ಎದ್ದಳು. ನಾನು ಅವಳ ಭುಜದ ಮೇಲೆ ಕೈ ಹಾಕಿ ನಡೆದೆ.


ನಂತರ ಎಗ್ಸ್ಯಾಮ್ ಮುಗಿದ ನಂತರ ನಮ್ಮ ಮಾವನ ಮದುವೆ ಇದ್ದದರಿಂದ , ನಮ್ಮ ಮನೆಯವರೆಲ್ಲ 1 ವಾರದ ಮುಂಚೆಯೇ ಊರಿಗೊರಟು ಹೋದ್ವಿ, ಹೋಗುವ ಮೊದಲು, ಅವಳನ್ನು ಭೇಟೆ ಯಾಗಿ , ಸಮಾಧಾನ ಮಾಡುವಪ್ರಯತ್ನ ಮಾಡಿದ್ದೆ, ಆದ್ರೆ ಹೇಗೆ.. ಸಾದ್ಯ....!!!.


ಇದೆಲ್ಲ ಆಗಿ ಇಂದಿಗೆ ಒಂದೂವರೆ   ತಿಗಳೇ ಆಗಿದೆ, ಆದ್ರೆ ಶ್ರೀಲೇಖ ಇಲ್ಲ ನನ್ನೊಂದಿಗೆ, ನಾನು ಮಾವನ ಮದುವೆ ಮುಗಿಸಿ ಬರುವಸ್ತರಲ್ಲಿ, ಶ್ರೀಲೇಖಳ, ಸಾವಿನ ಸುದ್ಧಿ ಕಾಯುತ್ತಿತ್ಟು.


 ಹೌದು, ಶ್ರೀ ಲೇಖ ಆತ್ಮಹತ್ಯೆ ಮಾಡಿಕೊಂಡಿದ್ಲು, ಅದೂ ಅತಿ ಘೋರವಾಗಿ, ತನ್ನ ಸುಂದರ ರೂಪವನ್ನ ಸುಟ್ಟುಕೊಂಡು ಪ್ರಾಣ ತೆತ್ತಿದ್ದಳು. ಆತ್ಮಹತ್ಯೆ ನೇ ಅವಳಿಗೆ ಕಂಡ ಏಕೈಕ ದಾರಿ....


ಎದೆ ನಡುಗಿಸುವಂತ ಅವಳ ಕಳೇಬರ ನೋಡಿ , ನಾನು ಒಂದು ವಾರ ಮೇಲೆದ್ದಿರಲಿಲ್ಲ..ಯಾರು ಕೊಟ್ಟರು ಅವಳ ಸುಂದರ ಜೀವನವನ್ನ ಹಾಳು ಮಾಡುವ ಸ್ವತಂತ್ರ ಅವರಪ್ಪನಿಗೆ, ಆ ಮುದಕನಿಗೆ ಇವಳೇ ಬೇಕಿತ್ತೆ ಮದುವೆ ಯಾಗಲು....??? ಇನ್ನೂ ಸ್ವಲ್ಪ ದಿನದಲ್ಲಿ ಅವಳೇ ಕೆಲಸಕ್ಕೆ ಸರಿ... ತನ್ನ ಮನೆ ಯನ್ನು ಅವಳೇ  ಸಾಕುತಿದ್ದಾಳಲ್ಲ.... ಕೊನೆ ಮೊದಲಿಲ್ಲದ ನನ್ನ ಪ್ರಶ್ನೆಗಳಿಗೆ ಯಾರು ಉತ್ತರಿಸಿಯಾರು.... ಆದರೂ ಒಂದುತುಂಬು ಜೀವದ ಬಲಿ ಇಲ್ಲಿ ......ಇಂದು, ಪೀ ಯು ಸೀ ರಿಸಲ್ಟ್ ನಲ್ಲಿ, ಅವಳೇ ಕಾಲೇಜ್ ಗೆ ಫರ್ಸ್ಟ್, ನಾನು ಸೆಕೆಂಡ್. , ಅವಳು ಸಾವಿನಲ್ಲೂ  ಪ್ರಥಮ ಸ್ಥಾನ ನಾ ತಾನೇ ಹೊಡೆದು ಬಿಟ್ಟಳು.


(ನಿಜ ಜೀವನದಲ್ಲಿ ನಡೆದ ಘಟನೆಯಾಧಾರಿತ)


ಚೆಂದದ ಸಲಹೆ, ಪ್ರತಿಕ್ರಿಯೆಗಳಿಗೆ ಕಾಯುತ್ತಿರುತ್ತೇನೆ.


Tuesday, 12 May 2015

ಮಿಸ್ಸಿಂಗ್ ಯೂ....!

 "ನಿವ್ಯ ಇದ್ದಿದ್ದರೆ ಚೆನ್ನಾಗಿ ಟೈಮ್ ಪಾಸ್ ಆಗ್ತಿತ್ತು ಅಲ್ವಾ ಅಪ್ಪು", ಅಂತ ಗಂಡನಕಡೆ, ನೋಡಿದರೆ ಕೊಂಚ ನಾಲಿಗೆ ತುಟಿಯಿಂದಾಚೆ ಬಿಟ್ಟು ನನ್ನ ಕಡೀನೆ ನೋಡ್ತಾ ಇದ್ರು. ಹ  ಹ ಹ  ನಗು ನನ್ನ ತುಟಿಮೇಲೆ, ನೀವ್ಯ ಯಾವಾಗ್ಲೂ ಹಾಗೆ , ನಿದ್ದೆ ಬಂದುಬಿಟ್ರಾಂತು ಆದೇ ಪೋಸ್ ನಲ್ಲಿ  ತೊಡೆಮೇಲೆ ಮಲ್ಗಥ ಇದ್ದಿದ್ದು.
"ನಿವ್ಯ", ಒಂಭತ್ತು ತಿಂಗಳ ಮುದ್ದು ಪೋರಿ, ನಮ್ಮ ಮನೆಯ ಪಕ್ಕದಲ್ಲಿ ಬಾಡಿಗೆಗಿದ್ದ, ಮರಾಠಿ ದಂಪತಿಯ ಮಗಳು, ನಿವ್ಯ ಮತ್ತು ನಿತ್ಯ ಅವಳಿ ಮಕ್ಕಳು.  ನಿವ್ಯ ನಮಗೆ ಚೆಂದಾಗಿ ಒಂದಿಕೊಂಡುಬಿಟ್ಟಿದ್ದಳು, ನಮ್ಮ ಮನೆಲೇ, ಆಟ, ಹಾಲು, ನಿದ್ದೆ ಎಲ್ಲಾ, ನಾಲ್ಕು ತಿಂಗಳ ಮಗುವಿನಿಂದ, ನಮ್ಮಲ್ಲೇ ಹೆಚ್ಚಾಗಿ ಇರುತ್ತಿದ್ದಳು.
ನಿತ್ಯ, ಸ್ವಲ್ಪ ರಿಸರ್ವ್ಡ್, ಅಮ್ಮನ ಮಗಳು. ಹಾಗಾಗಿ ನಮಗೆ ನಿವ್ಯ ತುಂಬಾ ಮುದ್ದು. ಮಕ್ಕಳನ್ನೇ ಎತ್ತಿಕೊಳ್ಳದ ನಮ್ಮ ಹೆಜಮಾನರು ನೀವ್ಯಾಳನ್ನು ಎತ್ತಿ ಮುದ್ದಾಡುತ್ತಿದ್ದರು, ಅವಳು ಹಾಗೆ.. ನಗೆ ಮಲ್ಲಿಗೆ.. ಮುದ್ದು ಬಂಗಾರಿ, ಹವಳದ ಮಣಿ...ತನ್ನ ನಗುವಿನಿಂದಾಗೆ ಎಲ್ಲರನ್ನೂ ಆಕರ್ಷಿಸಿಬಿಡುತ್ತಿದ್ದಳು.

ಅವರ ಮನೆಗೆ ಹೋದ್ರೆ ಸಾಕು, " ಆಂಟೀ ಕೆ ಪಾಸ್ ಜಾಒ ಬೇಟಿ" ಅಂತ, ಅವರಮ್ಮ, ನನ್ನ ಮಡಿಲಿಗೆ ನೀವ್ಯ ಳನ್ನು ತುರುಕೋಕ್ಕೆ ಕಾಯ್ತರ್ತಿದ್ರು. ಯಾಕಂದ್ರೆ, ಒಬ್ಬರೇ ಆ ಇಬ್ಬರು ತುಂಟ ಪುಟಾಣಿಗಳ್ನ ನೋಡ್ಕೊಳೋದ್ರಲ್ಲಿ, ಸುಸ್ತೋ ಸುಸ್ತು. ಯಾರಾದ್ರೂ ಬಂದ್ರೆ ಸಾಕು, ಸ್ವಲ್ಪ ಹೊತ್ತು  ಮಕ್ಕಳನ್ನ ನೋಡಿ ಕೊಂಡ್ರೆ ಸಾಕು ಅಂತ ಕಾಯ್ತಿರ್ತಿದ್ರು.

ಈಗ ಹತ್ತು ದಿನದಿಂದ  ನಮ್ಮ ಮನೆ ಬಿಕೋ ಅಂತಿದೆ, ನೀವ್ಯಳ ಅಳು,ನಗೆ,ಕೇಕೆ ಗಳಿಲ್ಲದೆ. ಅವರ ತಂದೆ ಸಾಫ್ಟ್‌ವೇರ್ ಇಂಜಿನಿಯರ್, ಹಾಗಾಗಿ ಹೈದೆರಾಬಾದ್ ನಿಂದ ಒಳ್ಳೆ ಆಫರ್ ಬಂದ ತಕ್ಷಣ ಒಪ್ಪಿಕೊಂಡು ಮನೆ ಕಾಲಿ ಮಾಡಿಕೊಂಡು ಹೊರಟು ಹೋದ್ರು ಹತ್ತು ದಿನಗಳ ಕೆಳಗೆ.


ಆ ಪುಟ್ಟಿನ ಮರೆಯೋಕೆ ಆಗ್ತಿಲ್ಲ, ವಾಟ್ಸ್ಸಪ್ಪ್ ನಲ್ಲಿ ಅವರಮ್ಮನ ಜೊತೆ ದಿನ ಚಾಟ್ ಮಾಡುವಾಗ್ಲೂ, "ಮಿಸ್ಸಿಂಗ್ ನಿವ್ಯ"  ಅನ್ನೋ ಪದ ವಿದ್ದೆ ಇರುತ್ತೆ, 
ಆದ್ರೆ "ಮಿಸ್ಸಿಂಗ್ ಯೂ ...." ಅನ್ನೋ ವಾಕ್ಯ ನನ್ನ ಮನದ ಧುಖ ನಾ ನಿಜವಾಗಿಯೂ  ಕನ್ವೇ ಮಾಡುತ್ತಾ.....? ಆ ಪುಟ್ಟಿಗೆ ನಾನು ನೆನಪಿರ್ತಿನ.....? ಅನ್ನೋ ಪ್ರಶ್ನೆ ಗಳು ಏಳ್ತವ. 

"ಮಿಸ್ಸಿಂಗ್ ಯೂ"ಅನ್ನೋದು..  ಈಗ ತುಂಬಾನೇ ಸುಲಭವೆನ್ನಿಸೋ ವೇ ಆಫ್ ಕನ್ವೇಯಿಂಗ್, ಆದ್ರೆ, ಇದಕ್ಕಿಂತಲೂ ಸೂಕ್ಷಮವಾದ, ಸೂಕ್ತವಾದ, ವಾಕ್ಯ ಅಥವಾ ಪದ ನಿಮಗೆ ಗೊತ್ತಾ.......ದಯವಿಟ್ಟು ತಿಳಿಸಿ....

ನಿಮ್ಮ ಚೆಂದದ ಉತ್ತರಗಳಿಗೆ ಹಾಗೂ, ಸಲಹೆ ಸೂಚನೆಗಳಿಗೆ ಎದಿರು ನೋಡುತ್ತಿರುತ್ತೇನೆ.....:-)

(ನಿವ್ಯ ಬ್ಲೂ ಫ್ರೋಕ್, ನಿತ್ಯ ಗ್ರೀನ್ ಫ್ರೋಕ್)



ಬ್ಲೋಗ್ ಬರೆಯಲು ಸ್ಪೂರ್ತಿ ಕೊಟ್ಟ ಎಲ್ಲಾ ಬ್ಲೊಗ್ಗಿಗರಿಗು ಧನ್ಯವಾದಗಳು...

ಬ್ಲೋಗ್ ಬರೆಯಲು ಸ್ಪೂರ್ತಿ ಕೊಟ್ಟ ಎಲ್ಲಾ ಬ್ಲೊಗ್ಗಿಗರಿಗು ಧನ್ಯವಾದಗಳು...


"ಮ್ಯಾರೇಜ್ ಆದ ಮೇಲೆ ಕೆಲಸಕ್ಕೆ ಇಸ್ಟ ಇದ್ದ್ರೆ ಹೋಗ್ ಬಹುದು ಇಲ್ಲಾ ಮನೆಲೇ ಇರಬಹುದು ನಿನ್ನಿಸ್ಟ" ಎಂದ ಮಾವನ ಮನೆಯವ್ರಿಗೆ,ಏನೆಳೊಬೇಕೋ ಗೊತ್ತಾಗಿರಲಿಲ್ಲಾ .ಮದುವೇ ಆಯ್ತು, ಗಂಡನ ಮನೆಗೆ ಬಂದು ಸೆಟ್ಲ್ ಆಗಿದ್ದು ಆಯ್ತು, MBA ಕಾಲೇಜ್ ಟಾಪರ್ ಆಗಿ ಪಾಸ್ ಮಾಡಿದ್ದು ವ್ಯರ್ಥಾ ಮಾಡಲಿಕ್ಕೆ ಈಸ್ಟ ಇರಲಿಲ್ಲ, ಮೊದಲು ಕೆಲಸ ಮಾಡುತಿದ್ ಆಫೀಸ್ ಈಗ ತುಂಬಾ ದೂರ, ಹೋಗಿ ರಿಸೈನ್ ಮಾಡಿ ಬಂದಾಯ್ತು, J P  ನಗರದ  ಆಸು  ಪಾಸಲ್ಲೇ ಕೆಲಸ ಆಗಬೆಕ್ಕಿತ್ತು, ಗಂಡನಿಗೆ ನೈಟ್  ಶಿಫ್ತೂ , ನಾನು ಡೇ ಶಿಫ್ಟು ಆದ್ರೆ ನಮ್ಮಿಬ್ರ ಭೇಟಿ ನೇ ಅಪರೂಪ ಆಗೋಗುತ್ತೆ, ಆದ್ರೂ, ಮೊದಲು ಬರ್ತಿದ್ಧ ಸಂಬಳಕ್ಕಿಂತ  ಜಾಸ್ತಿ ಸಂಬಳ  ಆಫರ್ ಮಾಡಿ ಕೆಲಸ ಸಿಕ್ಕಾಗ ಕುಶಿ ಯಾಗಿ ಹೋಗಿದ್ದೆ, ನಾಲ್ಕು ತಿಂಗಳು ಕೆಲಸ ಮಾಡೋದ್ರಲ್ಲಿ ಸಾಕಾಗಿ ಹೋಗಿತ್ತು, ಕೆಲಸ ಬಿಟ್ಟುಬಿಟ್ಟೆ ಮನೆಲಿ ಕೂತೆ.
ಮನೆಲಿ ಕೂತೋರಿಗೆ ನೂರಒಂದು ಸಲಹೆ ಕೊಡೋದರಲ್ಲಿ ನಮ್ಮ ಮಾವಂದು ಎತ್ತಿದ ಕೈ, ಪುಣ್ಯಕ್ಕೆ ಅತ್ತೆ ಇರಲಿಲ್ಲ !
ಅಂತೂ ಇಂತೂ ಮದುವೆ ಆದ 5 ವರ್ಷಧಮೇಲೆ ನನಗೆ ಈಗ ಸಮಯ ಸಿಕ್ಕಿದೆ ನನ್ನ ಬ್ಲೋಗ್ ಮಾಡಲು.
ಇದಕ್ಕೆ ತುಂಬು ಸ್ಪೂರ್ತಿ ಕೊಟ್ಟ ಬ್ಲೋಗಿಗರನ್ನು ಇಲ್ಲಿ ಸ್ಮರಿಸಿ ಧನ್ಯವಾದ ಅರ್ಪಿಸಲು ಇಸ್ಟ ಪಡ್ತೇನೆ.
http://sandhyeyangaladi.blogspot.in/  ನ ಸಂಧ್ಯಾ ,
http://ittigecement.blogspot.in/ ನ ಎಲ್ಲರ ಪ್ರಕಾಶಣ್ಣ,
nanunanprapancha.blogspot.in ,
abisarike.blogspot.in ಇನ್ನೂ ಹತ್ತು ಹಲವು ಬ್ಲೋಗ್‌ಗ್ ಗಳು
ನಾನಿನ್ನು ಈ ಬ್ಲೋಗ್ ಪ್ರಪಂಚಕ್ಕೆ  ಹೊಸಬಳು, ನಿಮ್ಮೆಲ್ಲರ ಪ್ರೋತ್ಸಾಹ ಹಾಗೂ, ಸಲಹೆ ಸೂಚನೆಗಳು ತುಂಬಾನೇ ಮುಕ್ಯ.ದಯವಿಟ್ಟು, ನನ್ನ ಬ್ಲೋಗಿನ ಬಗ್ಗೆ ಬರೆಯಿರಿ.