Monday 18 May 2015


ಸ್ವಾರ್ಥಿ......! ಭಾಗ 1


"ನಿಮ್ಮ ಮದುವೆಗೆ 18 ಲಕ್ಷ ಖರ್ಚಾಯ್ತು ಎಲ್ಲ ಸೇರಿ..., ಆದ್ರೆ ನೀನೇನು ತಲೆ ಕೆಡಿಸಿಕೋಬೇಡ, ನಾನು ನನ್ನ ಪೆನ್ಷನ್ ಮೇಲೆ ಸಾಲ ತಗೊಂಡಿರೋದು, ಆದ್ರೆ ಪೆನ್ಷನ್ ನಲ್ಲಿ ಒಂದೂ ಪೈಸೆ ಉಳಿಯೋಲ್ಲ ಅಷ್ಟೇ.." ಎಂದ ಮಾವನತ್ತ (ಗಂಡನ ತಂದೆ) ಬೆರಗಿನಿಂದ ನೋಡಿದಳು ಶಿಲ್ಪ, ಇನ್ನೂ ಮದುವೆಗಚ್ಚಿದ ಮೆಹಂದಿ ಅಳಿಸಿರಲಿಲ್ಲ ಕೈಗಳಲ್ಲಿ, ಹರಿಶಿಣದ ಛಾಯೆ ಮುಖದಲ್ಲಿ. 'ಏನು ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡದಕ್ಕೆ , ನನಗೆ 5 ರೇಶಿಮೆ ಸೀರೆ ಒಂದು ಮಾಂಗಲ್ಯ ಚೈನ್ ಮಾಡಿಸದ್ದಕ್ಕೆ 18 ಲಕ್ಷದ ಲೆಕ್ಕ' ಹೇಳುತ್ತಿದ್ದರಲ್ಲಾ ಎಂದು ಗಾಬರಿಗೊಂಡ ಮುಖದಿಂದ ಮಾವನ ಕಡೆ ನೋಡಿದಳು, ಗಿಡ್ಡನೆಯ., ಸೊಟ್ಟ ಮೂಗಿನ..ಗೆಡ್ಡೆ ಕಣ್ಣಿನ ಪರಮೇಶಯ್ಯ, ದೊಡ್ಡನೆ ಕಪ್ಪಿನಲ್ಲಿದ್ದ  ಕಾಫಿ ಸೊರ ಸೊರ ಹೀರುವುದರಲ್ಲಿ ಮಗ್ನರಾಗಿದ್ದರು.


ಮದುವೆಯಾದದ್ದಗಲಾಯ್ತು, ಯಾಕೋ ಈ ಮನುಷ್ಯನ ನಡತೆಯಲ್ಲಿನ ಬದಲಾವಣೆ ಎತ್ತಿ ತೋರುತ್ತಿತ್ತು, ಮದುವೆಯಾಗುವವರೆಗೂ, ತನ್ನಂಥ ಒಳ್ಳೆಯವನೇ ಇಲ್ಲ, ನಾನು ನನ್ನ ಜೀವನಾನ ಮುಡುಪಾಗಿಟ್ಟಿರೋದೇ ನನ್ನ ಇಬ್ಬರು ಮಕ್ಕಳಿಗೆ ಅಂತ ಪಾಡುತ್ತಿದ್ದ ಮನುಷ್ಯ ಈಗ, ನಾನು ನನ್ನಿಂದಲೇ ಮನೆ ನಡಿಯುತ್ತಿರೋದು, 'ನಿನ್ನ ಗಂಡ ಮದುವೆಗೆ ಮೊದಲು ಇಷ್ಟು ಕಾಟ ಕೊಟ್ಟ, ನಿನ್ನ ಮೈದುನ ಇಷ್ಟು ಕಾಡಿದ. ಅವರಿಗಾಗಿ ಇಷ್ಟು ಖರ್ಚುಮಾಡಿದ್ದೇನೆ ಇದುವರೆಗೂ' ಅಂತ, ತಾನು ಬರೆದಿದ್ದ ಚೀಟಿ ತೋರಿಸೋದು,

"ನಿನ್ನ ಗಂಡ, ಮದುವೆಗೆ ಮೊದಲು, ತನ್ನ ಸೋಶಿಯಲ್ habits ಬಗ್ಗೆ ಹೇಳಿದಾನ" ಎಂದ ಮಾವನತ್ತ ಮತ್ತೊಮ್ಮೆ ಬೆಚ್ಚಿ ನೋಡಿದಳು, "ಯಾವದರ ಬಗ್ಗೆ ಹೇಳ್ತಿದೀರಾ?" ಎಂದು ಗೊತ್ತಿದ್ದೂ ಎಂದಳು, "ಏನು ಇಲ್ಲ ಬಿಡು", ಎಂದು ಮತ್ತೆ ಪೇಪರ್‌ನಲ್ಲಿ ಮುಖ ಹುದುಗಿಸಿದ ಮಾವನತ್ತ, ನಿಜಕ್ಕೂ ಭಯದಿಂದ ನೋಡಿದಳು.(ನಿಜಕ್ಕೂ, ಗಂಡ ಮದುವೆಗೆ ಮೊದಲು ಫೋನ್ ಮಾಡಿ ಹೇಳಿದ್ದ, ತಾನು ಸ್ಮೋಕ್ ಮಾಡುವುದಾಗಿ) ಆದರೆ, ಇಲ್ಲಿ ಅದನ್ನು ಮುಚ್ಚಿಟ್ಟು ಮತ್ತೆ ಸೋಗಿನ ಮುಖ ತೋರಿದ ಮಾವನತ್ತ ಸಿಟ್ಟೇರಿತು.


"ನೀನು, ಕೇಶವನಿಗೆ ಫೋನ್ ಮಾಡಿ ಅವನನ್ನ ಒಲಿಸಿಕೊ, ಅವನಿಗೆ ಫೋನ್ ಮಾಡು ನಿನ್ನ ಹೆಸರು ಜಪ ಮಾಡುವಷ್ಟು ಅವನಿಗೆ ನಿನ್ನ ಹುಚ್ಚು ಹಿಡಿಸು" ಈ  ರೀತಿಯ ಮಾತುಗಳನ್ನಾಡಲು ದಿನಕ್ಕೆ ನಾಲ್ಕೈದು ಸಲ ಫೋನ್ ಮಾಡಿ ತಲೆ ತಿನ್ನುತ್ತಿದ್ದ ಪ್ರಕಾಶಯ್ಯ. ಆಗೆಲ್ಲ ಶಿಲ್ಪಾಲಿಗೆ, ತಲೆ ಕೆಡುತ್ತಿತ್ತು, ಪರಿಚಯದವರ ಮೂಲಕ ಬಂದ ಸಂಭಂಧವಿದು, ಮನೆಯವರಿಗೆಲ್ಲ ಇಷ್ಟವಾಗಿದ್ದು ಒಂದೇ ಕಾರಣಕ್ಕೆ, ಅತ್ತೆ ಇಲ್ಲದ ಮನೆ,  ಮಗಳು ಸುಖ ವಾಗಿದ್ದಾಳೆಂದು, ಜೊತೆಗೆ  ಪ್ರಕಾಶಯ್ಯನ ಬಣ್ಣದ ಮಾತುಗಳು...! 'ಸ್ವಂತ ಮನೆ ಇತ್ತು, ಆದರೆ  ಹೆಂಡತಿ ಅಪಘಾತ ಒಂದರಲ್ಲಿ ತೀರಿಕೊಂಡಿದ್ದರಿಂದ, ತನಗೆ ಆ ಮನೆಯಲ್ಲಿ ಇರಲು ಇಷ್ಟ ವಾಗದೆ ಮಾರಿದ್ದೇ 50 ಲಕ್ಷ ಕ್ಕೆ, ನನಗೆ ಇನ್ನೂ 3 ವರ್ಷ ಸರ್ವಿಸ್ ಇದೆ, ತಿಂಗಳಿಗೆ ಅರವತ್ತು ಸಾವಿರ ಸಂಬಳ, ರಿಟೈರ್ಮೆಂಟ್ ನಲ್ಲಿ, 20 ಲಕ್ಷ  ವರೆಗೂ ಬರುತ್ತೆ ವಗೈರ ವಗೈರ....' ಮದ್ಯಮ ವರ್ಗದ ಕುಟುಂಬದವರಾದ ಶಿಲ್ಪ ರ ತಂದೆ ತಾಯಿಗೆ , ಮಗಳು ಸುಖವಾಗಿದ್ದಾಳೆಂದು ಅನಿಸಿದ್ದರಲ್ಲಿತಪ್ಪಿಲ್ಲ. ಆದರೆ ಮಗನನ್ನು ಕರೆದುಕೊಂಡು ಬಾರದೆ ಇಷ್ಟು ವರಾತ ತೆಗೆದಿದ್ದ  ಪ್ರಕಾಶಯ್ಯ. (ನಂತರ ತಿಳಿದು ಬಂದಿದ್ದು ಅವರ ಮಗ ಕೇಶವನಿಗೆ, ಮದುವೆಯೇ ಇಷ್ಟವಿರಲಿಲ್ಲ, ಈ ಮನುಷ್ಯ ಮಾತ್ರ ಶಿಲ್ಪಾಳಿಗೆ ಬೆಂಬಿಡದ ಬೇತಾಳನ ಹಾಗೆ ಜೋತು ಬಿದ್ದಿದ್ದ).


ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ಶಿಲ್ಪ, ಪ್ರಕಾಶಯ್ಯನಿಗೆ ಒರಟಾಗಿ ಉತ್ತರಿಸಬೇಕೆಂದು ಬಾಯಿಗೆ ಬರುತ್ತಿದ್ದ ಮಾತುಗಳನ್ನು ತಡೆ ಹಿಡಿದ್ದಿದ್ದಳು ಹಿರಿಯರೆಂಬ ಗೌರವದಿಂದ, ಆದರೆ ಯಾವಾಗ, ಕಾಟ ತಡೆಯದವಾಳಾದಳೋ ಹೇಳಿದ್ದಳು,"ನಿಮ್ಮ ಮಗನಿಗೆ ಮದುವೆಯಾಗಲು ಇಷ್ಟ ವಿಲ್ಲದ ಮೇಲೆ, ನನ್ನ ಪ್ರಾಣ ಯಾಕೆ ತೆಗೀತಿರಿ, ನನ್ನ ಮದುವೆಯ ಬಗ್ಗೆ ತಲೆ ಕೆಡಿಸಿ ಕೊಳ್ಳಲು ನನ್ನ ತಂದೆ ತಾಯಿ ಇದ್ದಾರೆ, ತಾವು ದಯವಿಟ್ಟು ನನಗೆ ಫೋನ್ ಮಾಡ್ಬೇಡಿ "ಎಂದು ಉಗಿದ ಮೇಲೆ ಸುಮ್ಮನಾಗಿದ್ದರು.


ಮನೆಯವರೆಲ್ಲ ಈ ಸಂಭಂದದ ಬಗ್ಗೆ ನಿರ್ಲಕ್ಷ ತಳೆದು 4 ತಿಂಗಳೇ ಕಳೆದು ಹೋಗಿತ್ತು, ಧಿಡೀರೆಂದು ಶಿಲ್ಪಳ ಮೊಬೈಲಿಗೆ ಕೇಶವನಿಂದ ಮೀಟ್ ಮಾಡಬೇಕೆಂದು ಮೆಸೇಜ್ ಬಂದಾಗ, ಮೊದಲಿಗೆ ಸುಮ್ಮನಾಗಿದ್ದಳು, ನಂತರ ಕಾಲ್ ಮಾಡಿಯೂ ಮೀಟ್ ಮಾಡುವ ಬಗ್ಗೆ ಕೇಳಿದಾಗ, ತಂದೆ ತಾಯನ್ನು ಕೇಳಿ ಹೇಳುವುದಾಗಿ ಹೇಳಿ, ತಾಯಿಂದ ಅಪ್ಪಣೆ ಪಡೆದು ಮೀಟ್ ಮಾಡಿದ್ದಳು ಕೆಫೇ ಕಾಫೀ ಡೇ ನಲ್ಲಿ, ಕೇಶವ ಅಪ್ಪನಂತೆ ವಿಲಕ್ಷನವಾಗಿರದೆ, ಹ್ಯಾಂಡ್‌ಸಮ್ ಆಗಿದ್ದ, 5'8 ಇಂಚಿನ ಕೇಶವ ಸುಂದರ, ಸುಶೀಲ, ಸಂಭಾವಿತ, "ನನಗೆ ಮದುವೆಯಾಗಲು ಇಷ್ಟವಿರಲಿಲ್ಲ, ಆದ್ರೂ ತಂದೆ ಒತ್ತಾಯದಿಂದ ಮಾಡಿದ ಫಜೀತಿಯ ಬಗ್ಗೆ ಸಾರೀ ಕೇಳಿದ, ನಂತರ 4 ತಿಂಗಳ ನಂತರವೂ, ಮದುವೆಯ ಸುದ್ದಿ ಬಂದಾಗ, ಕಣ್ಣ ಮುಂದೆ ತೇಲಿದ್ದು ನಿಮ್ಮ ಮುಖ, ಯಾಕೋ ನೀವೇ ಲೈಫ್ ಪಾರ್ಟ್ನರ್ ಆದ್ರೆ ಚೆನ್ನ ಅನ್ನಿಸಿತು" ಎಂದು ಸರಳವಾಗಿ ಮಾತಾಡಿದವ, ಶಿಲ್ಪಳ ಮನಸನ್ನುಕದ್ದಿದ್ದ. ಜಾತಕಗಳ ಒಂದಾಣಿಕೆ, ಮನೆಯವರ ಒಪ್ಪಿಗೆ, ಹದಿನೈದೇ ದಿನದಲ್ಲಿ ಮದುವೆ ಕೂಡ ಆಗಿಹೋಗಿತ್ತು.


ದೇವಸ್ಥಾನದಲ್ಲಿ ಮದುವೆಯನ್ನು ನಾವೇ ಮಾಡಿಕೊಳ್ಳುವುದಾಗಿ ಒತ್ತಿ ಒತ್ತಿ ಹೇಳಿದ ಪ್ರಕಾಶಯ್ಯ, ರಿಸೆಪ್ಶನ್ ಮಾತ್ರ ಹೆಸರಾಂತ ಪಾರ್ಟೀ ಹಾಲಿನಲ್ಲಿ ಶಿಲ್ಪಳ ತಂದೆಯೇ ಮಾಡಿ ಕೊಟ್ಟಿದ್ದರು.ಬಂದವರೆಲ್ಲ ಮೆಚ್ಚಿದ್ದರು ದಂಪತಿಗಳ ಜೋಡಿಯನ್ನು, ಮತ್ತು ರಿಸೆಪ್ಶನ್ ನಾ. ಹೀಗಿರುವಾಗ, ಮದುವೆಗೆ 18 ಲಕ್ಷ ಖರ್ಚಾಯ್ತು ಎಂದ ಪ್ರಕಾಶಯ್ಯನ ಬಗ್ಗೆ ಶಿಲ್ಪ ಭಯಗೊಂಡಿದ್ದರಲ್ಲಿ ತಪ್ಪೇನಿರಲಿಲ್ಲ,


ಮದುವೆಯ ನಂತರ ನಿಜವಾದ ಬಣ್ಣ ತೋರಿಸ ತೊಡಗಿದ್ದ ಪ್ರಕಾಶಯ್ಯ, ಬೆಳಗ್ಗೆ ತಿಂಡಿಗೆ ಅನ್ನ್ನದ ಐಟಮ್ ಬೇಡ, ಬರೀ ದೋಸೆ, ಇಡ್ಲಿ, ಚಪಾತಿ ಗಳೇ ಆಗಬೇಕು. ರಾತ್ರಿ ಅನ್ನಸಾರು ಮುದ್ದೆ  ಮಾಡಿದ್ದರೆ, ಅನ್ನ ಸಾರಿನಲ್ಲಿ ಏನು ಸಿಗುತ್ತೆ ಅಂತ, ಚಪಾತಿ ಪಲ್ಯ ಮಾಡಿದ್ದರೆ ಜೀರ್ಣ ಆಗೋಲ್ಲ ಎಂದು ಊಟವೇ ಮಾಡುತ್ತಿರಲಿಲ್ಲ, ಆಗೆಲ್ಲಾ ಶಿಲ್ಪ ಏನು ಮಾಡಬೇಕೆಂದು ಅರ್ಥವಾಗದೆ ಧುಖಿಸಿದ್ದಳು.ಗಂಡನ ಬಳಿ ತೋಡಿಕೊಂಡಾಗ "ಅವರಿಗೆ ಚೆನ್ನಾಗಿ ನಾಲಿಗೆಚಪಲ, ಹೋಟೆಲ್ ಊಟದ ಹುಚ್ಚು ಚೆನ್ನಾಗೇ ಹೊರಗೆ ತಿಂದು ಬಂದಿರ್ತಾರೆ, ನೀನೇನು ತಲೆ ಕೆಡಿಸಿಕೊಳ್ಳಬೇಡ, ನಿನಗೆ ಏನು ಬೇಕೋ ಅದೇ ಅಡುಗೆ ಮಾಡು"ಎಂದಿದ್ದ.


"ನನ್ನ ಹೆಂಡತಿ ಮಾಡಿದಾಗೆ ಯಾರಿಗೂ ಅಡಿಗೆ ಮಾಡಲು ಬರಲ್ಲ, ಎಲ್ಲಾ ತರದ ಅಡುಗೆ ಮಾಡೋಳು" ಎಂಬ ಮಾತು ಪ್ರತಿ ಬಾರಿ ಊಟ ಮಾಡುವಾಗಲೂ ಕೇಳಿ ಕೇಳಿ, ಶಿಲ್ಪಾಳಿಗೆ ಸಾಕಾಗಿ ಹೋಗಿತ್ತು. ತಾನು MBA  ಮಾಡಿ, ಒಂದು ದೊಡ್ಡ ಕೊಂಪನಿ ಯಲ್ಲಿ ಮ್ಯಾನೇಜರ್ ಆಗಿ ದುಡೀತಿದ್ದೋಳು, ಈಗ, ಆ ಕಂಪನಿ ದೂರ ಅಂತ, ಬಿಟ್ಟು ಹತ್ತಿರದಲ್ಲೇ ಕೆಲಸ ಹುಡುಕುತ್ತಿದ್ದಳು, ಶಿಲ್ಪಾ ಅಡುಗೆ ಮಾಡೋದರಲ್ಲಿ ಅಚ್ಚುಕಟ್ಟು, ರುಚಿ ಶುಚಿಯಲ್ಲಿ ಎರಡು ಮಾತಿಲ್ಲ, ಅಂತದ್ರಲ್ಲಿ  ಈ ಮನುಷ್ಯ ನಡೆಸೋ.. ದಬ್ಬಾಳಿಕೆ ನೋಡಿ ರೋಸಿಹೋಗುತ್ತಿದ್ದಳು.



ಇನ್ನೂ ಇದೆ ... ಭಾಗ 2   ನೀರಿಕ್ಷಿಸಿ

No comments:

Post a Comment